ನವದೆಹಲಿ: ಭಾರತ್ ಎಐ ಇಂಪಾಕ್ಟ್ ಶೃಂಗಸಭೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿರುವ ಚೀನಾದ ರೋಬೋಟಿಕ್ ಡಾಗ್ ಅನ್ನು ತಮ್ಮ ಅವಿಷ್ಕಾರವೆಂದು ಬಿಂಬಿಸಿಕೊಂಡು ತಪ್ಪು ಮಾಹಿತಿ ನೀಡಿದ ಗಂಭೀರ ಆರೋಪದ ಮೇಲೆ, ಉತ್ತರ ಪ್ರದೇಶದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಶೃಂಗಸಭೆಯಿಂದ ತಕ್ಷಣ ಹೊರ ಹೋಗುವಂತೆ ಸೂಚಿಸಿದೆ.
ಸರ್ಕಾರಿ ಮೂಲಗಳ ಪ್ರಕಾರ, ವಿಶ್ವವಿದ್ಯಾಲಯ ತಕ್ಷಣವೇ ಎಐ ಶೃಂಗಸಭೆಯ ಎಕ್ಸ್ಪೊದಿಂದ ಹೊರ ಹೋಗುವಂತೆ ಸೂಚಿಸಲಾಗಿದೆ. ಚೀನಾದ ತಂತ್ರಜ್ಞಾನವನ್ನು ಆಮದು ಮಾಡಿಕೊಂಡು ಅದನ್ನು ದೇಶೀಯ ಅವಿಷ್ಕಾರವೆಂದು ತಪ್ಪು ಮಾಹಿತಿ ಹರಡಿದ್ದು, ಮುಜುಗರ ಉಂಟುಮಾಡಿದೆ ಎಂದು ತಿಳಿಸಲಾಗಿದೆ. ಹೀಗಾಗಿ, ಎಕ್ಸ್‌ಪೋದಿಂದ ವಿಶ್ವವಿದ್ಯಾಲಯ ತಕ್ಷಣವೇ ಹೊರಡುವಂತೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯ ಎಐ ಶೃಂಗಸಭೆಯಲ್ಲಿ ತಮ್ಮ ಅವಿಷ್ಕಾರ ಎಂದು ರೋಬೋಟಿಕ್ ಡಾಗ್ ಒರಿಯಾನ್ ಅನ್ನು ಪ್ರದರ್ಶಿಸಿದೆ. ವಿಶ್ವವಿದ್ಯಾಲಯವು ತನ್ನ 350 ಕೋಟಿ ರೂ ಎಐ ಪರಿಸರ ವ್ಯವಸ್ಥೆಯ ಭಾಗವೆಂದು ಇದನ್ನು ಪ್ರಸ್ತುತಪಡಿಸಿತ್ತು.
ರೋಬೋಟಿಕ್ ಡಾಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ, ಅದು ಚೀನಾದ ಯುನಿಟ್ರೀ ರೋಬೋಟಿಕ್ಸ್ನ ರೋಬೋಟಿಕ್ ಡಾಗ್ನ ಅವಿಷ್ಕಾರ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಸಾಧನ ಆನ್ಲೈನ್ನಲ್ಲಿ ಲಭ್ಯವಿದ್ದು, ಇದರ ಬೆಲೆ ಅಂದಾಜು 2ರಿಂದ 3 ಲಕ್ಷ ರೂ ಎಂದು ಹೇಳಲಾಗುತ್ತಿದೆ. ಚೀನಾದ ರೋಬೋಟಿಕ್ ಅವಿಷ್ಕಾರವನ್ನು ದೇಶೀಯ ಉತ್ಪನ್ನವೆಂದು ತಪ್ಪಾಗಿ ಪ್ರದರ್ಶಿಸಿದ
ನಡೆ ಭಾರೀ ಟೀಕೆಗಳಿಗೆ ಕಾರಣವಾಗಿದೆ.
ವಿಶ್ವವಿದ್ಯಾಲಯದ ಸ್ಪಷ್ಟನೆ: ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಹೇಳಿಕೆ ನೀಡಿರುವ ಗಲ್ಗೋಟಿಯಾಸ್ ವಿಶ್ವವಿದ್ಯಾಲಯ, ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದೆ. ಇದು ನಮ್ಮದೇ ವಿನ್ಯಾಸ ಎಂದು ವಾದಿಸಿದೆ. ನಮ್ಮ ಯೋಜನೆಗಳು ಸ್ಪಷ್ಟವಾಗಿವೆ. ನಮ್ಮ ವಿದ್ಯಾರ್ಥಿಗಳ ಸುಧಾರಿತ ತಂತ್ರಜ್ಞಾನದಲ್ಲಿ ಮುಂದಿದ್ದಾರೆ. ನಮ್ಮ ಕ್ಯಾಂಪಸ್‌ಗೆ ನಾವು ನಿರಂತರವಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ತಂದಿದ್ದೇವೆ. ರೋಬೋಡಾಗ್ ಅನ್ನು ಗ್ಯಾಲ್ಗೋಟಿಯಾಸ್ ನಿರ್ಮಿಸಿಲ್ಲ. ನಮ್ಮ ವಿರುದ್ಧದ ಅಪಪ್ರಚಾರದಿಂದ ತೀವ್ರ ನೋವಾಗಿದೆ. ಜಾಗತಿಕವಾಗಿ ಲಭ್ಯವಿರುವ ಪರಿಕರಗಳು ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಎಐ ಪ್ರೋಗ್ರಾಮಿಂಗ್ ಕಲಿಯಲು ಮತ್ತು ನೈಜ ಪ್ರಪಂಚದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ರೋಬೋಟಿಕ್ ವೇದಿಕೆಯನ್ನು ಬಳಸಲಾಗುತ್ತಿದೆ ಎಂದು ತಿಳಿಸಿದೆ.
ಕಾಂಗ್ರೆಸ್ ಟೀಕೆ: ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ಕಾಂಗ್ರೆಸ್ ಹರಿಹಾಯ್ದಿದ್ದು, ದೇಶದ ಘನತೆಗೆ ಹಾನಿಯಾಗಿದೆ ಎಂದು ಟೀಕಿಸಿದೆ. ಎಐ ಶೃಂಗಸಭೆಯಲ್ಲಿ ಭಾರತದ ಪ್ರತಿಭೆ ಮತ್ತು ದತ್ತಾಂಶವನ್ನು ಬಳಸಿಕೊಳ್ಳುವ ಬದಲು, ಇದೊಂದು ಅಸ್ತವ್ಯಸ್ತವಾದ ಪಿಆರ್ ಪ್ರದರ್ಶನ. ಭಾರತೀಯ ದತ್ತಾಂಶ ಮಾರಾಟಕ್ಕೆ ಚೀನಿ ಉತ್ಪನ್ನಗಳನ್ನು ಪ್ರದರ್ಶಿಸಲಾಗಿದೆ ಎಂದು ಟೀಕಿಸಿದೆ.















