ಅಯೋಧ್ಯೆ (ಉತ್ತರ ಪ್ರದೇಶ): ಮುಂಬೈ ಬಿಜೆಪಿ ಮುಖಂಡ ಮತ್ತು ಮುಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಜಿ ಅರಾಫತ್ ಶೇಖ್ ಅವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ದೇಶದ ಅತೀದೊಡ್ಡ ಸುಂದರವಾದ ಹಾಗೂ ವಿಶ್ವದ ಅತಿದೊಡ್ಡ ಕುರಾನ್ ಇರುವ ಅಯೋಧ್ಯೆಯ ಧನ್ನಿಪುರದಲ್ಲಿ ನಿರ್ಮಿಸುವ ಮಸೀದಿಗೆ 'ಮೊಹಮ್ಮದ್ ಬಿನ್ ಅಬ್ದುಲ್ಲಾ' ಎಂದು ಹೆಸರಿಡಲು ಉದ್ದೇಶಿಸಲಾಗಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿನ ಅನ್ವಯ ಅಯೋಧ್ಯೆಯಲ್ಲಿ ನಿರ್ಮಾಣ ಆಗಬೇಕಿರುವ ಮಸೀದಿಗೆ ಮುಸ್ಲಿಮರ ಪವಿತ್ರ ತೀರ್ಥ ಕ್ಷೇತ್ರ ಮೆಕ್ಕಾದ ಇಮಾಮ್ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಮೆಕ್ಕಾದಲ್ಲಿ ಇರುವ ಕಾಬಾದಲ್ಲಿ ಪ್ರತಿ ದಿನ ನೆರವೇರುವ ನಮಾಜ್ ನಡೆಸಿಕೊಡುವ ಇಮಾಮ್ - ಇ - ಹರಮ್ ಅವರು ಅಯೋಧ್ಯೆಯ ಮಸೀದಿಗೆ ಅಡಿಗಲ್ಲು ಹಾಕಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. 2019ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನ್ವಯ ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಇದ್ದ ಬಾಬರಿ ಮಸೀದಿಗೆ ಪರ್ಯಾಯವಾಗಿ ಅಯೋಧ್ಯೆಯ ಬೇರೊಂದು ಕಡೆ ಮಸೀದಿ ನಿರ್ಮಾಣ ಆಗಲಿದೆ.
ಅಯೋಧ್ಯೆ ನಗರದಿಂದ 25 ಕಿ. ಮೀ. ದೂರದಲ್ಲಿ ಇರುವ ಧನ್ನಿಪುರದಲ್ಲಿ ಮಸೀದಿ ನಿರ್ಮಾಣಕ್ಕೆ ರೂಪುರೇಷೆ ಸಿದ್ದವಾಗಿದೆ. ಉತ್ತರ ಪ್ರದೇಶ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ಭೂಮಿ ನೀಡಿದೆ. ಮಸೀದಿಯ ಕಟ್ಟಡ
ವಿನ್ಯಾಸ ಕೂಡಾ ಸಿದ್ದವಾಗಿದ್ದು, ಅಯೋಧ್ಯೆಯಲ್ಲಿ ದೇಶದಲ್ಲೇ ಅತಿ ದೊಡ್ಡ ಮಸೀದಿ ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು, ವಿಶ್ವದಲ್ಲೇ ಅತಿ ದೊಡ್ಡ ಕುರಾನ್ ಕೂಡಾ ಇಲ್ಲಿರಲಿದೆ. ಈ ಕುರಾನ್ ಪುಸ್ತಕವು 21 ಅಡಿ ಎತ್ತರ ಹಾಗೂ 36 ಅಡಿ ಅಗಲ ಇರಲಿದೆ.














