ಬೆಂಗಳೂರು ಜಲಮಂಡಳಿಗೆ ಮತ್ತೊಂದು ಗರಿ: ಕೇಂದ್ರ ಸರ್ಕಾರದ ಸ್ಪರ್ಧೆಯಲ್ಲಿ 100 ಕೋಟಿ ಬಹುಮಾನ!

Coastal Bulletin
ಬೆಂಗಳೂರು ಜಲಮಂಡಳಿಗೆ ಮತ್ತೊಂದು ಗರಿ: ಕೇಂದ್ರ ಸರ್ಕಾರದ ಸ್ಪರ್ಧೆಯಲ್ಲಿ 100 ಕೋಟಿ ಬಹುಮಾನ!

ಬೆಂಗಳೂರು: ಶ್ರೇಷ್ಠ ಗುಣಮಟ್ಟದ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದಕ್ಕೆ ಬಿಐಎಸ್ (Bureau Of Indian Standards) ಪ್ರಮಾಣಪತ್ರ ಪಡೆದ ಬೆಂಗಳೂರು ಜಲಮಂಡಳಿ ಈಗ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಬಿಡಬ್ಯುಎಸ್ಎಸ್​​ಬಿಯ ಎಸ್‌ಟಿಪಿಗಳ (Sewage Treatment Plant) ಗುಣಮಟ್ಟದ ಕಾರ್ಯವೈಖರಿಗೆ ಕೇಂದ್ರ ಸರ್ಕಾರ ಶ್ಲಾಘನೆ ವ್ಯಕ್ತಪಡಿಸಿದ್ದು, ಇದಕ್ಕಾಗಿ ಪ್ರೋತ್ಸಾಹ ಧನವಾಗಿ 103 ಕೋಟಿ ರೂಪಾಯಿ ಮಂಜೂರು ಮಾಡಿದೆ.

ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 30 ಎಸ್‌ಟಿಪಿಗಳ ಗುಣಮಟ್ಟದ ಬಗ್ಗೆ ಕೇಂದ್ರ ಸರಕಾರ ಜಲ್‌ ಹಿ ಅಮೃತ್‌ ಯೋಜನೆ ಅಡಿ ಶ್ಲಾಘಿಸಿದೆ. 23 ಎಸ್‌ಟಿಪಿಗಳಿಗೆ ಕ್ಲೀನ್‌ ವಾಟರ್‌ ಕ್ರೆಡಿಟ್‌ ಅಡಿಯಲ್ಲಿ 5 ಸ್ಟಾರ್‌ ರೇಟಿಂಗ್‌ ನೀಡಿದ್ದು, ಪ್ರೋತ್ಸಾಹ ಧನವಾಗಿ 103 ಕೋಟಿ ರೂಪಾಯಿ ಮಂಜೂರು ಮಾಡಿದೆ. ಈ ಮೂಲಕ ಬೆಂಗಳೂರು ಜಲ ಮಂಡಳಿಯ ಮುಕುಟಕ್ಕೆ ಮತ್ತೊಂದು ಗರಿ ಲಭಿಸಿದಂತಾಗಿದೆ.

ಜಲ ಮಂಡಳಿಯು, ಬೆಂಗಳೂರು ನಗರದಲ್ಲಿ ದಿನನಿತ್ಯ ಉತ್ಪತ್ತಿಯಾಗುವ 1450 ಎಂ.ಎಲ್‌.ಡಿ ಯಷ್ಟು ನೀರನ್ನು ಸಂಸ್ಕರಿಸುತ್ತದೆ. ಇದಕ್ಕಾಗಿ ನಗರದ ವಿವಿಧ ಭಾಗಗಳಲ್ಲಿ 34 ಎಸ್‌ಟಿಪಿಗಳನ್ನು ನಿರ್ಮಿಸಿದ್ದು, ಸಂಸ್ಕರಿಸಿದ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಏಷ್ಯಾ ಖಂಡದಲ್ಲೇ ಪ್ರಥಮ ಸ್ಥಾನದಲ್ಲಿದೆ. ಎಸ್‌ಟಿಪಿಗಳಿಂದ ಸಂಸ್ಕರಿಸಲಾಗುವ ನೀರನ್ನು ರಾಜಧಾನಿಯಲ್ಲಿನ ಕೆರೆಗಳಿಗೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಕೆರೆಗಳಿಗೆ ತುಂಬಿಸಲಾಗುತ್ತಿದೆ.

ಕೇಂದ್ರ ಸರಕಾರದ ''ಜಲ್‌ ಹಿ ಅಮೃತ್‌ ಯೋಜನೆ'' ಅಡಿ ದೇಶದ ನಗರಗಳಲ್ಲಿನ ಎಸ್‌ಟಿಪಿಗಳ ಗುಣಮಟ್ಟ ಪರಿಶೀಲನೆಗೆ ಅರ್ಜಿ ಸಲ್ಲಿಸಲು ಕೇಂದ್ರ ಸರಕಾರ ಅವಕಾಶ ನೀಡಿತ್ತು. ಉತ್ತಮ ಮಾನದಂಡಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ರೀತಿಯಲ್ಲಿ ನೀರಿನ ಸಂಸ್ಕರಣೆಯನ್ನು ಮಾಡುವಂತಹ ಎಸ್‌ಟಿಪಿಗಳಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಇದಾಗಿದೆ. ಇದರಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ಜಲಮಂಡಳಿಗೆ ಅತಿಹೆಚ್ಚು ಸ್ಟಾರ್‌ ರೇಟಿಂಗ್‌ ದೊರೆಯುವ ಮೂಲಕ 103 ಕೋಟಿಯಷ್ಟು ಹೆಚ್ಚಿನ ಪ್ರೋತ್ಸಾಹ ಧನವನ್ನು ತನ್ನದಾಗಿಸಿಕೊಂಡಿದೆ.

ಕೇಂದ್ರ ಸರಕಾರದಿಂದ ಭಾರೀ ಮೆಚ್ಚುಗೆ: ಬೆಂಗಳೂರು ಜಲಮಂಡಳಿ ತನ್ನ ಅಧೀನದ ಎಸ್‌ಟಿಪಿಗಳಲ್ಲಿ ಕೊಳಚೆ ನೀರನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಅಳವಡಿಸಿಕೊಂಡಿರುವಂತಹ ಮಾನದಂಡಗಳ ಬಗ್ಗೆ

ಕೇಂದ್ರ ಸರಕಾರದ ವಸತಿ ಮತ್ತು ನಗರಾಭಿವೃದ್ದಿ ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ. 23 ಎಸ್‌ಟಿಪಿಗಳು ಫೈವ್‌ ಸ್ಟಾರ್‌ ರೇಟಿಂಗ್‌ ಪಡೆದುಕೊಂಡಿದ್ದು, 6 ಪ್ಲಾಂಟ್‌ಗಳು 4 ಸ್ಟಾರ್‌ ಹಾಗೂ 1 ಪ್ಲಾಂಟ್‌ 3 ಸ್ಟಾರ್‌ ರೇಟಿಂಗ್‌ ಪಡೆದುಕೊಂಡಿದೆ. ದೇಶದಲ್ಲಿ ಗುಜರಾತ್‌, ಮಹರಾಷ್ಟ್ರ ಹೊರತುಪಡಿಸಿದರೆ ಅತಿಹೆಚ್ಚು ಪ್ರೋತ್ಸಾಹ ಧನವನ್ನು ಪಡೆದುಕೊಂಡ ಕೀರ್ತಿ ಬೆಂಗಳೂರು ಜಲಮಂಡಳಿಯದ್ದಾಗಿದೆ.

ಕೇಂದ್ರ ಸರಕಾರದಿಂದ ಬೆಂಗಳೂರು ಜಲಮಂಡಳಿಯು 103 ಕೋಟಿ ರೂಪಾಯಿ ಪ್ರೋತ್ಸಾಹ ಧನ ಪಡೆದುಕೊಂಡಿದ್ದಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿ, ಬಿಡಬ್ಯುಎಸ್​​ಎಸ್​ಬಿಯ ಕಾರ್ಯನಿರ್ವಹಣೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರವನ್ನು ಇನ್ನಷ್ಟು ಸುಂದರಗೊಳಿಸುವ ಹಾಗೂ ಸುಸ್ಥಿರ ಯೋಜನೆಗಳನ್ನ ಅಳವಡಿಸಿಕೊಳ್ಳುವುದು ಬ್ರಾಂಡ್ ಬೆಂಗಳೂರು ಯೋಜನೆಯ ಪ್ರಮುಖ ಉದ್ದೇಶ. ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನ ಉತ್ತಮ ಗುಣಮಟ್ಟದ ತಂತ್ರಜ್ಞಾನವನ್ನು ಬಳಸಿ ಸಂಸ್ಕರಿಸುವುದು ನಮ್ಮ ಆದ್ಯತೆಯಾಗಿದೆ. ಇದನ್ನ ಪುರಸ್ಕರಿಸಿ ಕೇಂದ್ರ ಸರಕಾರದ ವತಿಯಿಂದ ಪ್ರೋತ್ಸಾಹ ದೊರೆತಿರುವುದು ಬಹಳ ಸಂತಸದ ವಿಷಯವಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ರಾಮ್‌ ಪ್ರಸಾತ್ ಮನೋಹರ್‌ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಬೆಂಗಳೂರು ಜಲಮಂಡಳಿಯು ಕೊಳಚೆ ನೀರನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಮಾನದಂಡಗಳನ್ನು ಅಳವಡಿಸಿಕೊಂಡಿದೆ. ಸಂಸ್ಕರಿಸಿದ ನೀರಿನ ಬಳಕೆಯಲ್ಲಿ ಏಷ್ಯಾದಲ್ಲೇ ಮೊದಲ ಸ್ಥಾನದಲ್ಲಿರುವ ನಾವು, ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕಳೆದ 8 ತಿಂಗಳಿನಿಂದ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದೇವೆ. ಪ್ರೋತ್ಸಾಹ ಧನದ ಹಣದಿಂದ ಎಸ್‌ಟಿಪಿಗಳನ್ನು ಇನ್ನಷ್ಟು ಆಧುನಿಕರಿಸಲು ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

Leave a Comment