ವಾರಣಾಸಿ : ಅಂಜುಮನ್ ಇಸ್ಲಾಮಿಯಾ ಮಸೀದಿ ಸಮಿತಿಯು ಜ್ಞಾನವಾಪಿ ಮಸೀದಿಯ ಕಾಂಪೌಂಡ್‌ನಲ್ಲಿ ಪೂಜೆ ಮಾಡುವ ಹಕ್ಕುಗಳನ್ನು ಕೋರಿ ಐವರು ಹಿಂದೂ ಮಹಿಳೆಯರು ಸಲ್ಲಿಸಿರುವ ಮೊಕದ್ದಮೆಯ ನಿರ್ವಹಣೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.ಹಿಂದುಗಳು ಸಲ್ಲಿಸಿರುವ ಅರ್ಜಿಯು ವಿಚಾರಣೆಗೆ ಒಳಪಡಬಾರದು ಎಂದು ಅಂಜುಮನ್ ಇಸ್ಲಾಮಿಯಾ ಮಸೀದಿ ಸಮಿತಿಯು ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತಾಗಿ ತೀರ್ಪು ನೀಡಿರುವ ಕೋರ್ಟ್, ಈ ಅರ್ಜಿಯು ವಿಚಾರಣೆಗೆ ಅರ್ಹವಾಗಿದ್ದು, ಸೆಪ್ಟೆಂಬರ್ 22 ರಿಂದ ಪ್ರಕರಣದ ವಿಚಾರಣೆ ಆರಂಭ ಮಾಡುವುದಾಗಿ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ಅದರೊಂದಿಗೆ ಜ್ಞಾನವಾಪಿ ಮಸೀದಿಯ ಹೊರ ಆವರಣದಲ್ಲಿರುವ ಗೋಡೆಗಳ ಮೇಲಿನ ಹಿಂದೂ ದೇವತೆಗಳನ್ನು ಪೂಜೆ ಮಾಡಲು ದೆಹಲಿ ಮೂಲದ ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಗೆ ದೊಡ್ಡ ಗೆಲುವು ಸಿಕ್ಕಂತಾಗಿದೆ. ವಾರಣಾಸಿ ಜಿಲ್ಲಾ ಕೋರ್ಟ್ ಸೋಮವಾರ ನೀಡಿದ ಮಹತ್ವದ ತೀರ್ಪಿನಲ್ಲಿ ಹಿಂದುಗಳು ಸಲ್ಲಿರುವ ಅರ್ಜಿ ವಿಚಾರಣೆಗೆ ಅರ್ಹ ಎನ್ನುವ ಮಹತ್ವದ ತೀರ್ಪು ನೀಡಿದೆ. ಇದರ ಬೆನ್ನಲ್ಲಿಯೇ ವಾರಣಾಸಿಯಲ್ಲಿ ಹಿಂದುಗಳ ಸಂಭ್ರಮ ಮುಗಿಲು ಮುಟ್ಟಿದೆ.
ವಾರಣಾಸಿಯ ಜ್ಞಾನವಾಪಿ-ಶೃಂಗಾರ ಗೌರಿ ವಿವಾದದ ಮುಂದಿನ ವಿಚಾರಣೆ ಮುಂದುವರಿಯಲಿದೆ. ಈ ಪ್ರಕರಣವು ವಿಚಾರಣೆಗೆ ಯೋಗ್ಯವಾಗಿದೆ ಎಂದು ವಾರಣಾಸಿ ಜಿಲ್ಲಾ ನ್ಯಾಯಾಲಯ ಹೇಳಿದೆ. ಹಿಂದೂಗಳ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿದ್ದು, ಮುಸ್ಲಿಂ ಕಡೆಯ ಆಕ್ಷೇಪಗಳನ್ನು ತಿರಸ್ಕರಿಸಿದೆ ಎಂದು ವಿಶ್ವ ವೈದಿಕ ಸನತ್ ಸಂಘದ ಮುಖ್ಯಸ್ಥ ಜಿತೇಂದ್ರ ಸಿಂಗ್ ಬಿಸೆನ್ ತಿಳಿಸಿದ್ದಾರೆ. ಸೆಪ್ಟೆಂಬರ್ 22 ರಂದು ಮುಂದಿನ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ತೀರ್ಪಿನ ವೇಳೆ, ಹಿಂದೂ ಪರ ವಕೀಲರಾದ ಹರಿಶಂಕರ್ ಜೈನ್ ಮತ್ತು ವಿಷ್ಣು ಶಂಕರ್ ಜೈನ್ ನ್ಯಾಯಾಲಯದಲ್ಲಿ ಹಾಜರಿದ್ದರು. ಆದರೆ, ಮುಖ್ಯ ಅರ್ಜಿದಾರರಾದ ರಾಖಿ ಸಿಂಗ್ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ನ್ಯಾಯಾಲಯದಲ್ಲಿ ಒಟ್ಟು 62 ಮಂದಿಗೆ ಹಾಜರಾಗಲು
ಅವಕಾಶ ನೀಡಲಾಗಿತ್ತು. ಆಗಸ್ಟ್ 24 ರಂದು, ಜ್ಞಾನವಾಪಿ ಮಸೀದಿಯ ಆವರಣದಲ್ಲಿರುವ ಶೃಂಗಾರ್ ಗೌರಿ ದೇವಸ್ಥಾನದಲ್ಲಿ ಪೂಜೆಗೆ ಅವಕಾಶ ನೀಡುವಂತೆ ಹಿಂದೂ ಮತ್ತು ಮುಸ್ಲಿಂ ಕಡೆಯ ವಾದವನ್ನು ಮುಕ್ತಾಯಗೊಳಿಸಲಾಯಿತು. ಇದಾದ ಬಳಿಕ ವಾರಣಾಸಿ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ತೀರ್ಪನ್ನು ಸೆಪ್ಟೆಂಬರ್ 12ಕ್ಕೆ ಅಂದರೆ ಇಂದಿನವರೆಗೆ ಕಾಯ್ದಿರಿಸಿದ್ದರು.
ಅತ್ಯಂತ ಸೂಕ್ಷ್ಮ ಎಂದು ಪರಿಗಣಿಸಲಾಗಿರುವ ಈ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ನಗರದಲ್ಲಿ ಹಿಂದೂ-ಮುಸ್ಲಿಂ ಮಿಶ್ರಿತ ಜನಸಂಖ್ಯೆ ಇರುವ ಪ್ರದೇಶದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಆದೇಶದ ನಂತರ ಕಾನೂನು ಸುವ್ಯವಸ್ಥೆ ಹದಗೆಡಬಾರದು ಎಂಬ ಕಾರಣಕ್ಕೆ ನಿನ್ನೆ ರಾತ್ರಿಯಿಂದಲೇ ಕೆಲ ಪ್ರದೇಶಗಳಲ್ಲಿ ಪೊಲೀಸರು ಗಸ್ತು ಹೆಚ್ಚಿಸಿದ್ದಾರೆ.














