ಭಾರತ ದೇಶಾದ್ಯಂತ ಇದೀಗ ಹೊಸ ಚರ್ಚೆ ಶುರುವಾಗಿದೆ. ಮಾಲ್ಡೀವ್ಸ್ ವರ್ಸಸ್ ಲಕ್ಷ ದ್ವೀಪ ಸಮರ ಇದು. ಭಾರತೀಯರು ಪ್ರವಾಸಕ್ಕೆ ಹೋಗುವಾಗ ಮಾಲ್ಡೀವ್ಸ್‌ಗೆ ಏಕೆ ಹೋಗಬೇಕು? ಪಕ್ಕದಲ್ಲೇ ಇರುವ ಲಕ್ಷ ದ್ವೀಪಕ್ಕೆ ಏಕೆ ಹೋಗಬಾರದು ಅನ್ನೋ ವಾದ ಸರಣಿ ಶುರುವಾಗಿದೆ. ಪ್ರವಾಸೋದ್ಯಮದಲ್ಲೂ ಭಾರತ ಆತ್ಮ ನಿರ್ಭರತೆ ಸಾಧಿಸಬೇಕು ಅನ್ನೋ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ. ಈ ಎಲ್ಲಾ ಚರ್ಚೆಗೆ ಕಾರಣವಾಗಿದ್ದು ಪ್ರಧಾನಿ ಮೋದಿ ಅವರು ಹಾಕಿದ್ದ ಫೋಟೋ.. ಲಕ್ಷ ದ್ವೀಪದ ಬೀಚ್‌ಗಳಲ್ಲಿ ವಿಹರಿಸಿ ಪ್ರಧಾನಿ ಮೋದಿ ಅವರು ಹಾಕಿದ್ದ ಫೊಟೋ ಇದೀಗ ಭಾರೀ ಚರ್ಚೆ ಹುಟ್ಟು ಹಾಕಿದೆ. ಭಾರತದ ರಾಜಕಾರಣಿಗಳೂ ಸೇರಿದಂತೆ ಮಾಲ್ಡೀವ್ಸ್‌ನ ರಾಜಕಾರಣಿಗಳು ಪ್ರಧಾನಿ ಮೋದಿ ಅವರ ಫೋಟೋ ಬಹಳ ಕೆಟ್ಟದಾಗಿ ವ್ಯಂಗ ಮಾಡಿದ್ದರು ಆದರೆ ಪ್ರಧಾನಿ ಮೋದಿಯವರ ಲೆಕ್ಕಾಚಾರವೇ ಬೇರೆ!
ಭಾರತ ಹಾಗೂ ವಿಶಾಲ ಹಿಂದೂ ಮಹಾ ಸಾಗರದ ಪುಟ್ಟ ದ್ವೀಪ ಸಮೂಹ ಮಾಲ್ಡೀವ್ಸ್ ದೇಶಗಳ ನಡುವೆ ಹಲವು ದಶಕಗಳಿಂದ ಉತ್ತಮ ಬಾಂಧವ್ಯ ಇದೆ. ಮಾಲ್ಡೀವ್ಸ್ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಭಾರತ ಕೈ ಹಿಡಿದಿದೆ. ಮಿಲಿಟರಿ ನೆರವು, ಕುಡಿಯುವ ನೀರು, ತುರ್ತು ವೈದ್ಯಕೀಯ ನೆರವು ಸೇರಿದಂತೆ ಹಲವು ಮೂಲ ಸೌಕರ್ಯಗಳ ಕಾರಣಗಳಿಗಾಗಿ ಭಾರತ ಸೇನೆಯ ಹೆಲಿಕಾಪ್ಟರ್‌ಗಳು ಹಾಗೂ ಡಾರ್ನಿಯರ್ ಯುದ್ಧ ವಿಮಾನ ಕೂಡಾ ಮಾಲ್ಡೀವ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭಾರತದ ಮುಖ್ಯ ಭೂಮಿಗೆ ಕರೆ ತರುವ ಕೆಲಸವನ್ನ ಭಾರತೀಯ ಸೇನೆಯ ಯೋಧರು ಮಾಡ್ತಿದ್ದರು. ಆದರೆ, ಮಾಲ್ಡೀವ್ಸ್ ದೇಶಕ್ಕೆ ಹೊಸ ಅಧ್ಯಕ್ಷರು ಬಂದ ನಂತರ ಚಿತ್ರಣ ಬದಲಾಯ್ತು.
ಮಾಲ್ಡೀವ್ಸ್ ದೇಶದ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರು ಭಾರತ ಮೊದಲು ಅನ್ನೋ ನೀತಿಯನ್ನ ಅನುಸರಿಸುತ್ತಿದ್ದರು. ಆದರೆ, ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರಿಗೆ ಚೀನಾ ದೇಶ ಬಹಳ ಪ್ರಿಯವಾಗಿ ಕಂಡಿದೆ. ಜೊತೆಗೆ ಚೀನಾದಿಂದ ಭಾರೀ ಪ್ರಮಾಣದಲ್ಲಿ ಸಾಲ ಪಡೆದಿರುವ ಮಾಲ್ಡೀವ್ಸ್ ದೇಶ, ಡ್ರ್ಯಾಗನ್‌ನ ತಾಳಕ್ಕೆ ತಕ್ಕಂತೆ ಕುಣಿಯಲೇ ಬೇಕಾದ ಅನಿವಾರ್ಯತೆ ಸಿಲುಕಿದೆ. ಹೀಗಾಗಿ, ಮಾಲ್ಡೀವ್ಸ್ ಸರ್ಕಾರ ಆಂತರಿಕ ಭದ್ರತೆ ನೆಪವೊಡ್ಡಿ ಮಾಲ್ಡೀವ್ಸ್ ರಾಜಧಾನಿ ಮಾಲೆ ಸೇರಿದಂತೆ ಹಲವೆಡೆ ಇದ್ದ ಭಾರತೀಯ ಸೇನೆಯ 77 ಸಿಬ್ಬಂದಿಯನ್ನು ವಾಪಸ್ ಹೋಗುವಂತೆ ತಾಕೀತು ಮಾಡಿದರು. ಮಾಲ್ಡೀವ್ಸ್ ನೂತನ ಅಧ್ಯಕ್ಷರ ಈ ಭಾರತ ವಿರೋಧಿ ನೀತಿಯೇ ಎಲ್ಲ ಸಂಘರ್ಷಕ್ಕೂ ಮೂಲ ಕಾರಣ.
ಅಂತಾರಾಷ್ಟ್ರೀಯ ಮಟ್ಟದ ಈ ಬೆಳವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತಕ್ಕೆ, ಮಾಲ್ಡೀವ್ಸ್ ದೇಶದ ಶಕ್ತಿ ಹಾಗೂ ದೌರ್ಬಲ್ಯಗಳ ಅರಿವು ಇದ್ದೇ ಇದೆ. ಮಾಲ್ಡೀವ್ಸ್ ದೇಶಕ್ಕೆ ಪ್ರವಾಸೋದ್ಯಮವೇ ಅತಿ ದೊಡ್ಡ ಆದಾಯದ ಮೂಲಕ. ಪ್ರವಾಸೋದ್ಯಮವೇ ಜೀವಾಳ. ಅದರಲ್ಲೂ ಮಾಲ್ಡೀವ್ಸ್ ಪ್ರವಾಸ ಮಾಡೋದ್ರಲ್ಲಿ ಭಾರತೀಯರೇ ಮೊದಲಿಗರು. 2022ರಲ್ಲಿ ಮಾಲ್ಡೀವ್ಸ್ ಪ್ರವಾಸ ಮಾಡಿದ ಒಟ್ಟು 1.5 ದಶ ಲಕ್ಷ ಪ್ರವಾಸಿಗರ ಪೈಕಿ ಶೇ. 12.6 ರಷ್ಟು ಪ್ರವಾಸಿಗರು ಭಾರತೀಯರು. 2 ಲಕ್ಷಕ್ಕೂ ಹೆಚ್ಚು ಭಾರತೀಯರು ಪ್ರತಿ ವರ್ಷ ಮಾಲ್ಡೀವ್ಸ್‌ಗೆ ಭೇಟಿ ನೀಡುತ್ತಾರೆ. ಭಾರತೀಯರ ನಂತರ ರಷ್ಯಾ ಹಾಗೂ ಚೀನಾ ಪ್ರವಾಸಿಗರ ಸಂಖ್ಯಾ ಬಲ ಕಂಡು ಬರುತ್ತದೆ.
ಭಾರತದ ಪ್ರವಾಸಿಗರು ದೊಡ್ಡ ಮಟ್ಟದಲ್ಲಿ
ಮಾಲ್ಡೀವ್ಸ್‌ಗೆ ಲಾಭ ತಂದು ಕೊಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಮಾಲ್ಡೀವ್ಸ್ ಸಮೀಪದಲ್ಲೇ ಇರುವ ಲಕ್ಷ ದ್ವೀಪದ ಪ್ರವಾಸ ಮಾಡಿದರು. ಲಕ್ಷ ದ್ವೀಪದ ಬೀಚ್‌ಗಳಲ್ಲಿ ಸುತ್ತಾಡಿದರು. ಸ್ನಾರ್ಕಲಿಂಗ್ ಮಾಡಿದರು. ಇಲ್ಲಿನ ಕಡಲ ತೀರದ ಪ್ರಶಾಂತತೆ ಹಾಗೂ ಸೌಮ್ಯ ವಾತಾವರಣವನ್ನು ಕೊಂಡಾಡಿದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಸಮೇತ ಮಾಹಿತಿ ಪ್ರಕಟಿಸಿದರು. ಆದರೆ, ಎಲ್ಲಿಯೂ ಕೂಡಾ ಮಾಲ್ಡೀವ್ಸ್ ಹೆಸರೆತ್ತಲೇ ಇಲ್ಲ! ಪ್ರಧಾನಿ ಮೋದಿ ಅವರ ಪ್ರವಾಸದ ಒಳಗುಟ್ಟು ತಿಳಿಯದ ಮಂದಿ ರಜಾ ಮಜಾ ಅನುಭವಿಸುತ್ತಿದ್ದೀರಾ ಎಂದು ಕಾಲೆಳೆದರು. ಆದರೆ, ಪ್ರಧಾನಿ ಮೋದಿ ಪ್ರಯೋಗಿಸಿದ ಅಸ್ತ್ರ, ಮಾಲ್ಡೀವ್ಸ್‌ಗೆ ಸಖತ್ತಾಗೇ ಬಿಸಿ ಮುಟ್ಟಿಸಿತ್ತು!
ದೇಶದೊಳಗೆ ಆಡಳಿತ - ವಿಪಕ್ಷಗಳ ಗುದ್ದಾಟ ಸಹಜ. ಆದರೆ, ಪ್ರಧಾನಿ ಮೋದಿ ವಿರುದ್ಧ ಮಾಲ್ಡೀವ್ಸ್ ದೇಶದ ರಾಜಕಾರಣಿಗಳೂ ಕೂಡಾ ಕೆಸರೆರೆಚಾಟ ಶುರು ಮಾಡಿದ್ದಾರೆ. ಪ್ರಧಾನಿ ಮೋದಿ ಇಸ್ರೇಲ್ ದೇಶದ ಕೈಗೊಂಬೆ ಅನ್ನೋ ಆರೋಪ ಮಾಡಿರುವ ಮಾಲ್ಡೀವ್ಸ್‌ನ ಸಚಿವೆ ಮರಿಯನ್, ಜಾಕೆಟ್ ಧರಿಸಿ ಸಮುದ್ರಕ್ಕೆ ಜಿಗಿಯುತ್ತಾರೆ ಅಂತಾ ಲೇವಡಿ ಮಾಡಿದ್ದರು. ಮತ್ತೊಬ್ಬ ಸಚಿವ ಮಜಿದ್ ಎಂಬಾತ ಭಾರತದ ಬೀಚ್‌ಗಳು ಕೊಳಕಿನಿಂದ ತುಂಬಿವೆ ಅನ್ನೋ ಹೇಳಿಕೆ ನೀಡಿದ್ದ.
ಭಾರತದ ಬಗ್ಗೆ, ಪ್ರಧಾನಿ ಮೋದಿ ಬಗ್ಗೆ ಮಾಲ್ಡೀವ್ಸ್ ಸರ್ಕಾರದ ಪ್ರತಿನಿಧಿಗಳು ಕೀಳು ಅಭಿರುಚಿಯ ಹೇಳಿಕೆ ನೀಡಿದ್ದೇ ತಡ, ಸಾಕಷ್ಟು ಭಾರತೀಯರು ಮಾಲ್ಡೀವ್ಸ್ ಪ್ರವಾಸವನ್ನು ರದ್ದು ಮಾಡುತ್ತಿದ್ದಾರೆ. ಲಕ್ಷ ದ್ವೀಪ ಅಥವಾ ಬೇರೆ ದೇಶಗಳ ಪ್ರವಾಸವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರಂತೂ ತಾವು ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿದ ಮಾಹಿತಿ, ಟಿಕೆಟ್ ರದ್ದು ಮಾಡಿದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೆ ತಮ್ಮ ಬೆಂಬಲ ಪ್ರಕಟಿಸಿದ್ದಾರೆ.
ಇತ್ತ ಬಾಲಿವುಡ್ ತಾರೆಗಳು, ಕ್ರಿಕೆಟ್ ಸ್ಟಾರ್‌ಗಳೂ ಕೂಡಾ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ನಮ್ಮ ದೇಶದ ದ್ವೀಪಗಳ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಅಂತಾ ಸಿಡಿದೆದ್ದಿರುವ ಬಾಲಿವುಡ್ ನಟರು ಲಕ್ಷ ದ್ವೀಪವನ್ನು ಅಭಿವೃದ್ದಿ ಮಾಡೋಣ ಅನ್ನೋ ಘೋಷಣೆ ಹೊರಡಿಸಿದ್ದಾರೆ. ಇತ್ತ ಕ್ರಿಕೆಟ್ ತಾರೆ ಸಚಿನ್ ತೆಂಡೊಲ್ಕರ್, ಮಹಾರಾಷ್ಟ್ರದ ಕಡಲ ತೀರದಲ್ಲಿ ಕ್ರಿಕೆಟ್ ಆಡುವ ಫೋಟೋ ಹಂಚಿಕೊಂಡು ಮಾಲ್ಡೀವ್ಸ್ ವಿಚಾರದಲ್ಲಿ ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿದ್ದಾರೆ.














