ಚಂಡೀಗಢ (ಜ.5): ಬಟಿಂಡಾದಿಂದ ಹುಸೇನಿವಾಲಾ ಶಹೀದ್ ಸ್ಮಾರಕಕ್ಕೆ ರಸ್ತೆ ಮಾರ್ಗವಾಗಿ ಹೋಗುತ್ತಿದ್ದಾಗ ಪ್ರಧಾನಿ ಮೋದಿ ಅವರ ಬೆಂಗಾವಲು ವಾಹನವು ಫ್ಲೈಓವರ್‌ನಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿತ್ತು. ಪ್ರಧಾನಿಯವರು ಸುಮಾರು 20 ನಿಮಿಷಗಳ ಕಾಲ ಇಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಅವರ ಬೆಂಗಾವಲು ಪಡೆ ಅಲ್ಲಿಂದಲೇ ಬಟಿಂಡಾಕ್ಕೆ ವಾಪಸಾಗಿದೆ. ಈ ಪ್ರಕರಣದ ಕುರಿತಾಗಿ ಪಂಜಾಬ್ ಸರ್ಕಾರದ ಕೆಲವು ಕ್ರಮಗಳ ಮೇಲೆ ಅನುಮಾನವಾಗಿದೆ.
ದೇಶದ ಪ್ರಧಾನಿ ಯಾವುದೇ ಕಾರ್ಯಕ್ರಮದ ನಿಮಿತ್ತ ಯಾವುದೇ ರಾಜ್ಯಕ್ಕೆ ಭೇಟಿ ನೀಡಿದರೂ, ಆಯಾ ರಾಜ್ಯದ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಸ್ವಾಗತಿಸಬೇಕು. ಅದು ಮಾತ್ರವಲ್ಲದೆ ಪ್ರಧಾನಿ ರಾಜ್ಯದಲ್ಲಿ ಇರುವಷ್ಟು ಹೊತ್ತು ಅವರೊಂದಿಗೆ ಇರಬೇಕು ಎನ್ನುವ ನಿಯಮವಿದೆ. ಆದರೆ ಬುಧವಾರ ಈ ಮೂವರಲ್ಲಿ ಯಾರೊಬ್ಬರೂ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿರಲಿಲ್ಲ ಎಂಬ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಪ್ರಕರಣದ ಮೇಲೆ ಅನುಮಾನಕ್ಕೆ ಕಾರಣವಾಗಿದೆ.
ಪ್ರಧಾನಿ ಮೋದಿ ಇಂದು ಬೆಳಗ್ಗೆ
ಬಟಿಂಡಾ ತಲುಪಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ತೆರಳಬೇಕಿತ್ತು. ಆ ವೇಳೆಗೆ ಮಳೆ ಮತ್ತು ಹವಾಮಾನ ವೈಪರೀತ್ಯ ಕಂಡು ಬಂದ ಕಾರಣ,ಹವಾಮಾನ ಸರಿಯಾಗಲು ಅಲ್ಲಿ ಪ್ರಧಾನಿಯವರು 20 ನಿಮಿಷಗಳ ಕಾಲ ಕಾದಿದ್ದರು. ಹೀಗಿದ್ದರೂ ಹವಾಮಾನ ಸುಧಾರಿಸದಿದ್ದಾಗ, ಪ್ರಧಾನಿಯವರು ರಸ್ತೆಯ ಮೂಲಕ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ನಿರ್ಧರಿಸಿ 2 ಗಂಟೆಗೂ ಹೆಚ್ಚು ಸಮಯದಲ್ಲಿ ಅಲ್ಲಿಗೆ ತಲುಪಿದರು. ಈ ವಿಷಾಯವಾಗಿ ಪಂಜಾಬ್ ಡಿಜಿಪಿ ಜತೆ ಪ್ರಧಾನಿ ಭದ್ರತಾ ಪಡೆ ಮಾಹಿತಿ ನೀಡಿದೆ.













