Coastal Bulletin

ಜಮ್ಮು ಕಾಶ್ಮೀರ :ಕಾಶ್ಮೀರದ ಪುಲ್ವಾಮಾದ ಹಂಜಿನ್ ಗ್ರಾಮದಲ್ಲಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ಮಧ್ಯೆ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಉಕ್ಕಲಿ ಗ್ರಾಮದ ಕಾಶಿರಾಯ ಶಂಕ್ರರೆಪ್ಪ ಬೊಮ್ಮನಳ್ಳಿ (35) ಎಂಬ ಯೋಧ ಹುತಾತ್ಮರಾಗಿದ್ದಾರೆ.

ಕಾಶಿರಾಯ ಬೊಮ್ಮನಳ್ಳಿ ಅವರು ಕರ್ತವ್ಯದಲ್ಲಿದ್ದ ವೇಳೆ,ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರಾಜ್ಪೊರಾ ಪ್ರದೇಶದ ಹಂಜಿನ್ ಗ್ರಾಮದಲ್ಲಿ ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ನಡೆದಿದ್ದು, ಈ ಸಂದರ್ಭ ಕಾಶಿರಾಯರಿಗೆ ಗುಂಡು ತಾಗಿ ಹುತಾತ್ಮರಾಗಿದ್ದಾರೆ. ಈ ಮಾಹಿತಿ ಯೋಧನ ಕುಟುಂಬಕ್ಕೆ ಸೇನಾಧಿಕಾರಿಗಳು ತಿಳಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಗ್ರಾಮದಲ್ಲಿ ಶೋಕದ ಕಾರ್ಮೋಡ ಕವಿದಿದೆ.

ಹುತಾತ್ಮ ಯೋಧ ಕಾಶಿರಾಯ

ಬೊಮ್ಮನಳ್ಳಿ, ಪಾರ್ಥಿವ ಶರೀರ ಜು.3 ರಂದು ಶ್ರೀನಗರದಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಗುತ್ತಿದ್ದು ಬಳಿಕ ಬೆಳಗಾವಿಯಿಂದ ಯೋಧನ ಸ್ವಗ್ರಾಮ ಉಕ್ಕಲಿಗೆ ತಲುಪೋ ನಿರೀಕ್ಷೆ ಇದ್ದು ನಂತರ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುತಾತ್ಮ ಯೋಧ, ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ ಹಾಗೂ ಇಬ್ಬರು ಸಹೋದರನನ್ನು ಅಗಲಿದ್ದಾರೆ.

Leave a Comment