ಹರಿಯಾಣ:ಸೋಮವಾರ ನೂಹ್ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ದೊಡ್ಡ ಮೆರವಣಿಗೆ ಆಯೋಜಿಸಿತ್ತು. ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆ ಪ್ರಯುಕ್ತ ಈ ಮೆರವಣಿಗೆ ಆಯೋಜಿಸಲಾಗಿತ್ತು. ಈ ವೇಳೆ ಕೋಮು ಗಲಭೆ ನಡೆದಿತ್ತು. ಗಲಭೆ ವೇಳೆ ಆರು ಜನ ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಸೀದಿಯೊಂದರ ಮೌಲ್ವಿ, ಇಬ್ಬರು ಭದ್ರತಾ ಪಡೆ ಸಿಬ್ಬಂದಿ, ಓರ್ವ ನಾಗರಿಕ,ಇಬ್ಬರು ವಿ.ಎಚ್.ಪಿ ಕಾರ್ಯಕರ್ತರು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ಈ ಕೋಮು ಗಲಭೆ ನಡೆದ ಕೆಲವು ಗಂಟೆಗಳ ಬಳಿಕ ಮಸೀದಿಗೆ ಬೆಂಕಿ ಹಚ್ಚಲಾಗಿತ್ತು. ಮಸೀದಿ ಸುತ್ತಮುತ್ತ ನಿಲ್ಲಿಸಲಾಗಿದ್ದ ವಾಹನಗಳನ್ನೂ ಜಖಂಗೊಳಿಸಲಾಗಿತ್ತು. ಈ ಗಲಭೆಯು ಹರ್ಯಾಣದ ನೂಹ್ ಪಟ್ಟಣದ ಬಳಿಯ ಪಕ್ಕದ ಹಲವು ಗ್ರಾಮಗಳಿಗೆ ಹರಡಿದೆ.
ಹರ್ಯಾಣ ರಾಜ್ಯದ ನೂಹ್‌ನಲ್ಲಿರುವ ನಲ್ಹರ್ ಮಹದೇವ ಮಂದಿರದ ಮೇಲೆ ಸಾವಿರಾರು ಮಂದಿ ದಾಳಿ ನಡೆಸಿದ್ದಾರೆ. ದಾಳಿಕೋರರು ದೇಗುಲದ ಆಸುಪಾಸಿನಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಸಶಸ್ತ್ರ ಪಡೆ ಯೋಧರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸೋಮವಾರ ಮಧ್ಯಾಹ್ನದ ವೇಳೆಗೆ ದಾಳಿ ನಡೆಸಿದ ದಾಳಿಕೋರರು ಕನಿಷ್ಟ 2,500ರಷ್ಟು ಮಂದಿ ಇದ್ದರು ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ದೇಗುಲದ ಆಸುಪಾಸಿನ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಿದೆ.
ಹರ್ಯಾಣದ ನೂಹ್ ಪಟ್ಟಣದಿಂದ 7 ಕಿ. ಮೀ.
ದೂರದಲ್ಲಿ ಈ ಮಂದಿರ ಇದೆ. ದೇಗುಲವು ಬೆಟ್ಟ ಗುಡ್ಡಗಳಿಂದ ಆವೃತವಾಗಿದೆ. ಇದೀಗ ದೇಗುಲದ ಬಳಿ ತೆರಳುವ ಎಲ್ಲ ಮಾರ್ಗಗಳನ್ನೂ ಭದ್ರತಾ ಪಡೆಗಳು ಬಂದ್ ಮಾಡಿವೆ. ದಾಳಿಕೋರರ ಗುಂಪು ಬೆಟ್ಟ ಗುಡ್ಡಗಳ ಮೂಲಕ ದೇವಸ್ಥಾನದ ಬಳಿ ಬಂದು ಸೇರಿತ್ತು. ದೇಗುಲದ ಒಳಗೆ ಇರುವವರ ಮೇಲೆ ಗುಂಡಿನ ದಾಳಿ ಹಾಗೂ ಕಲ್ಲು ತೂರಾಟ ನಡೆಯಿತು. ಈ ವೇಳೆ ದೇಗುಲದ ಒಳಗಿದ್ದ ಭಕ್ತರು ಹಲವು ಗಂಟೆಗಳ ಕಾಲ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹರಸಾಹಸಪಟ್ಟರು.















