ಕಾಸರಗೋಡು : ಡಿಸೆಂಬರ್ 22 ರಿಂದ 10 ದಿನಗಳ ಕಾಲ ಸಾಂಸ್ಕೃತಿಕ ವೈಭವದ ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವಕ್ಕೆ ಕಾಸರಗೋಡು ಸಜ್ಜಾಗಿದೆ. ಕೇರಳದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ವಿಶಿಷ್ಟ ಸಂಪ್ರದಾಯಗಳನ್ನು ಪ್ರದರ್ಶಿಸುವುದರ ಮೂಲಕ ದ್ವಿತೀಯ ವರ್ಷದ ಈ ಉತ್ಸವವು ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಉತ್ಸವದ ಪ್ರಮುಖ ವೇದಿಕೆಯಲ್ಲಿ ಪ್ರತಿದಿನ ರಾತ್ರಿ 7 ಗಂಟೆಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. 22ರಂದು ತೈಕ್ಕುಡಂ ಬ್ರಿಡ್ಜ್‌ನಿಂದ ಮೆಗಾ ಲೈವ್ ಮ್ಯೂಸಿಕ್ ಬ್ಯಾಂಡ್, 23ರಂದು ಶಿವಮಣಿ, ಪ್ರಕಾಶ್, ಉಳ್ಳಿಯೇರಿ, ಶರತ್ ಬಳಗದಿಂದ ಮ್ಯೂಸಿಕಲ್ ಫ್ಯೂಷನ್ ಟ್ರಯೋ ಪ್ರದರ್ಶನ, 24ರಂದು ಕೆ.ಎಸ್.ಚಿತ್ರಾ ಮತ್ತು ತಂಡದಿಂದ ‘ಚಿತ್ರ ವಸಂತಂ’ ಸಂಗೀತ ಔತಣ, 25ರಂದು ಎಂ.ಜಿ.ಶ್ರೀ ಕುಮಾರ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ, 26ರಂದು ಶೋಭನಾ ಮತ್ತು ಬಳಗದಿಂದ ನೃತ್ಯ ಮೇಳ, 27ರಂದು ಪದ್ಮಕುಮಾರ್ ಮತ್ತು ಬಳಗದಿಂದ ಓಲ್ಡ್ ಈಸ್ ಗೋಲ್ಡ್ ಸಂಗೀತ ಮಾಧುರ್ಯ, 28ರಂದು ಅತುಲ್ ನರುಕರ ಅವರಿಂದ ಸೋಲ್ ಆಫ್ ಫೋಕ್, ಫೋಕ್ ಬ್ಯಾಂಡ್,
29ರಂದು ಮಾಪಿಳ್ಳೆ ಹಾಡುಗಾರ ಕಣ್ಣೂರು ಶರೀಫ್ ಮತ್ತು ಬಳಗದಿಂದ ಮಾಪಿಳ್ಳ ಹಾಡುಗಳ ರಾತ್ರಿ, 30ರಂದು ಗೌರಿ ಲಕ್ಷ್ಮೀ ಅವರಿಂದ ಮ್ಯೂಸಿಕಲ್ ಬ್ಯಾಂಡ್, 31ರಂದು ರಾಸ ಬೇಗಂ ಮತ್ತು ತಂಡದಿಂದ ಗಜಲ್ ಮತ್ತು ಹೊಸ ವರ್ಷಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮ, ಬೇಕಲ ಕಿನಾರೆಯಲ್ಲಿ ಸುಡುಮದ್ದು ಪ್ರದರ್ಶನ ಆಯೋಜಿಸಲಾಗಿದೆ. ತೇಜಸ್ವಿನಿ ವೇದಿಕೆಯಲ್ಲಿ ಜಿಲ್ಲೆಯ ಕುಟುಂಬಶ್ರೀ ಕಾರ್ಯಕರ್ತೆಯರು ಮತ್ತು ಇತರ ಕಲಾವಿದರಿಂದ ಎಲ್ಲ 10 ದಿನಗಳು ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಮೋಹಿನಿಯಾಟ್ಟಂ, ಭರತನಾಟ್ಯ, ಕೂಚುಪುಡಿ, ತಿರುವಾತಿರಕಳಿ, ಮಂಗಳಂಕಳಿ, ಒಪ್ಪನ, ಸಿನಿಮಾ ನೃತ್ಯ, ಜಾನಪದ ನೃತ್ಯ, ಸಮೂಹ ನೃತ್ಯ, ಯೋಗ ನೃತ್ಯ, ಅಸ್ಸಾಮಿ ನೃತ್ಯ, ಯಕ್ಷಗಾನ ಮತ್ತು ರಾಜಸ್ಥಾನಿ ನೃತ್ಯ ಕಾರ್ಯಕ್ರಮಗಳು ಕುಟುಂಬಶ್ರೀ ಮತ್ತು ಸಿಡಿಎಸ್‌ಎಸ್ ನೇತೃತ್ವದಲ್ಲಿ ನಡೆಯಲಿದೆ.














