ಕೊಚ್ಚಿ: ಮಿಲ್ಮಾ ಎಂದೂ ಕರೆಯಲ್ಪಡುವ ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟವು ಕೇರಳದಲ್ಲಿ ಕರ್ನಾಟಕ ಹಾಲು ಒಕ್ಕೂಟದ ನಂದಿನ ಡೈರಿ ಉತ್ಪನ್ನಗಳ ಮಾರಾಟವನ್ನು ವಿರೋಧ ಮಾಡಲು ನಿರ್ಧಾರ ಮಾಡಿದೆ.
ಒಂದು ರಾಜ್ಯದ ಸಹಕಾರಿ ಸಂಸ್ಥೆಯು ಮತ್ತೊಂದು ರಾಜ್ಯದ ಸಹಕಾರಿ ಸಂಸ್ಥೆಯ ಮಾರುಕಟ್ಟೆಯಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವುದು ಸಹಕಾರದ ತತ್ವಗಳು ಮತ್ತು ಮೂಲಭೂತ ಮೌಲ್ಯಗಳಿಗೆ ವಿರುದ್ಧವಾಗಿದೆ ಆದುದರಿಂದ ಭಾರತೀಯ ರಾಷ್ಟ್ರೀಯ ಸಹಕಾರಿ ಡೈರಿ ಫೆಡರೇಶನ್ ನ ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು, ದೇಶದಲ್ಲಿರುವ ಹಾಲು ಒಕ್ಕೂಟಗಳು ತಾವು ಇಷ್ಟು ದಿನ ಅನುಸರಿಸಿಕೊಂಡು ಬಂದಿರುವ ಕೆಲವು ಆಚರಣೆಗಳನ್ನು ಮುರಿಯಲು ಬಂದಿರುವುದು ನೈತಿಕವಾಗಿ ಸರಿಯಲ್ಲ ಎಂದು ಮಿಲ್ಮಾ
ಮಲಬಾರ್ ವಲಯ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಎಸ್ ಮಣಿ ಹೇಳಿದರು.
ಮಿಲ್ಮಾ ಹಾಲು ಒಕ್ಕೂಟವು ಕೇವಲ ಹಬ್ಬದ ಸಮಯದಲ್ಲ ಕರ್ನಾಟಕದ ನಂದಿನಿ ಹಾಗೂ ತಮಿಳುನಾಡಿನ ಆವಿನ್ ಸಂಸ್ಥೆಗಳ ಮೇಲೆ ಹಾಲಿಗಾಗಿ ಅವಲಂಬಿತವಾಗಿರುತ್ತದೆ. ಆ ಸಮಯದಲ್ಲಿ ಮಿಲ್ಮಾದಲ್ಲಿ ಹಾಲಿನ ಉತ್ಪಾದನೆಯೂ ಕಡಿಮೆ ಇರುತ್ತದೆ. ಆದರೆ, ಇದೇ ವಿಚಾರದ ಲಾಭವನ್ನು ತೆಗೆದುಕೊಳ್ಳುವುದು ಸರಿಯಲ್ಲ. ನಂದಿನಿಯ ಆಗಮನವು ಕೇರಳ ಮಾರುಕಟ್ಟೆಯಲ್ಲಿರುವ ಇತರ ಹಾಲು ಮಾರಾಟಗಾರರ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿದ್ದಾರೆ.















