ಕೊಚ್ಚಿ: ಪ್ರೀತಿಸಿದ ಹುಡುಗನಿಗಾಗಿ ಇಸ್ಲಾಂಗೆ ಮತಾಂತರಗೊಂಡು ಕೇರಳದಲ್ಲಿ ಭಾರೀ ಸುದ್ದಿಯಾಗಿದ್ದ “ಹದಿಯಾ ಪ್ರಕರಣ’ಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ತಮ್ಮ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಆರೋಪಿಸಿ ಹದಿಯಾಳ ಅಪ್ಪ ಅಶೋಕನ್ ಕೆ.ಎಂ. ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಭಾಗವಾಗಿರುವ ಕೆಲವು ವ್ಯಕ್ತಿಗಳು ಹಾಗೂ ಆಕೆಯ ಪತಿಯೇ ಹದಿಯಾಳನ್ನು ಅಕ್ರಮವಾಗಿ ಕೂಡಿಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ಹದಿಯಾ ಕಾಣಿಸುತ್ತಿಲ್ಲ, ಆಕೆಯ ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ತಮ್ಮ ಪುತ್ರಿ ಮಲಪ್ಪುರಂನಲ್ಲಿ ಹೋಮಿಯೋಪಥಿ ಕ್ಲಿನಿಕ್ ತೆರೆದಿದ್ದಳು. ಅದು ಕೂಡ ಮುಚ್ಚಿದೆ. ತಾನು ತನ್ನ ಪತಿಯಿಂದ ದೂರವಾಗಿ, ಬೇರೊಬ್ಬನನ್ನು ವಿವಾಹವಾಗಿದ್ದಾಗಿ ಆಕೆ ನಮ್ಮೊಂದಿಗೆ ಹೇಳಿಕೊಂಡಿದ್ದಳು ಎಂದೂ ಅಶೋಕನ್ ಹೇಳಿದ್ದಾರೆ.
2016ರಲ್ಲಿ ಕೊಯಮತ್ತೂರಿನ ವೈದ್ಯಕೀಯ ಕಾಲೇಜಿನಲ್ಲಿ ಕಲಿಯುತ್ತಿದ್ದ ಕೊಟ್ಟಾಯಂ ಮೂಲದ ಅಖಿಲಾ ಬಳಿಕ ಇಸ್ಲಾಂಗೆ ಮತಾಂತರಗೊಂಡು ತನ್ನ ಸಹಪಾಠಿ ಶಾಹೀನ್ ಸಫೀನ್ ಎಂಬಾತನನ್ನು ಮದುವೆಯಾಗಿದ್ದಳು. ಈ ಕುರಿತ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆನಂತರ, ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಎನ್‌ಐಎ ತನಿಖೆಯನ್ನೂ ನಡೆಸಿದ್ದು, ಇದರಲ್ಲಿ ಯಾವುದೇ ಲವ್ ಜಿಹಾದ್ ಕೃತ್ಯ ಕಂಡುಬಂದಿಲ್ಲ ಎಂದು ರಿಪೋರ್ಟ್ ನೀಡಿತ್ತು. ಅಲ್ಲದೆ, ಹದಿಯಾ ಎಂದು ಬದಲಾಗಿದ್ದ ಅಖಿಲಾ ತನ್ನ ಮದುವೆ, ಖಾಸಗಿತನದ ಬಗ್ಗೆ ನಿರ್ಧರಿಸಲು ಸ್ವತಂತ್ರಳಿದ್ದೇನೆ ಎಂದು ಹೇಳಿಕೆ ನೀಡಿ, ಲವ್ ಜಿಹಾದ್
ಆರೋಪವನ್ನು ತಳ್ಳಿಹಾಕಿದ್ದಳು. ಕೇರಳದಲ್ಲಿ ಲವ್ ಜಿಹಾದ್ ಕೃತ್ಯಗಳು ಹೆಚ್ಚುತ್ತಿವೆ ಎನ್ನುವ ಆರೋಪಕ್ಕೆ ಈಕೆಯ ಹೇಳಿಕೆ ದೊಡ್ಡ ಹಿನ್ನಡೆಯಾಗಿತ್ತು ಆಕೆಯ ಹೇಳಿಕೆಯಂತೆ, ಗಂಡನ ಜೊತೆ ಬದುಕಲು ಸುಪ್ರೀಂ ಕೋರ್ಟ್ ಆದೇಶ ಮಾಡಿತ್ತು.
ಈಗ ಮಾಧ್ಯಮಕ್ಕೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹದಿಯಾ ತನ್ನ ಎರಡನೇ ಮದುವೆ ಬಗ್ಗೆಯೂ ಹೇಳಿಕೊಂಡಿದ್ದು, ನಾನು ಮುಸ್ಲಿಂ ಆಗಿ ಸುಖವಾಗಿದ್ದೇನೆ. ಮೊದಲ ಗಂಡನಿಗೆ ಡೈವರ್ಸ್ ನೀಡಿದ್ದೇನೆ. ಮತ್ತೊಬ್ಬ ಮುಸ್ಲಿಂ ಯುವಕನನ್ನು ಎರಡನೇ ಮದುವೆಯಾಗಿದ್ದೇನೆ. ಈ ವಿಚಾರ ತನ್ನ ಹೆತ್ತವರಿಗೂ ತಿಳಿದಿದೆ ಎಂದು ಹೇಳಿದ್ದಾಳೆ. ನನ್ನ ಹೆತ್ತವರು ನನ್ನೊಂದಿಗೆ ನಿರಂತರ ಸಂಪರ್ಕದಲ್ಲೇ ಇದ್ದರು. ಆದರೆ ತಂದೆಯನ್ನು ಸಂಘ ಪರಿವಾರದ ಕೆಲವೊಂದು ಶಕ್ತಿಗಳು ತಮಗೆ ಬೇಕಾದ ರೀತಿ ಬಳಸಿಕೊಳ್ಳುತ್ತಿವೆ ಎಂದೂ ಹದಿಯಾ ಇತ್ತೀಚೆಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಳು. ಅಶೋಕನ್ ಎರಡನೇ ಬಾರಿಗೆ ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣದ ವಿಚಾರಣೆ ಇನ್ನೂ ನಡೆದಿಲ್ಲ. ಇದರ ನಡುವೆ, ಆಕೆಯ ಹೇಳಿಕೆಯ ವಿಡಿಯೋ ಬಂದಿದ್ದು ಕೇರಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.














