ಪರಮಾಣು ಘಟಕಗಳ ಮೇಲೆ ಅಮೆರಿಕ ಬಾಂಬ್​: ಇರಾನ್​ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ

Coastal Bulletin
ಪರಮಾಣು ಘಟಕಗಳ ಮೇಲೆ ಅಮೆರಿಕ ಬಾಂಬ್​: ಇರಾನ್​ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ

ನವದೆಹಲಿ: ಮಧ್ಯಪ್ರಾಚ್ಯ ರಾಷ್ಟ್ರಗಳಾದ ಇರಾನ್ ಮತ್ತು ಇಸ್ರೇಲ್ ಮಧ್ಯೆ ತೀವ್ರ ಸಂಘರ್ಷ ಏರ್ಪಟ್ಟಿದೆ. ಎರಡು ರಾಷ್ಟ್ರಗಳ ನಡುವಿನ ಕಾದಾಟದಲ್ಲಿ ಅಮೆರಿಕ ನೇರವಾಗಿ ಭಾಗಿಯಾಗಿದ್ದು, ಈ ಉದ್ವಿಗ್ನತೆ ಮತ್ತಷ್ಟು ಭೀಕರವಾಗುವ ಸಾಧ್ಯತೆ ಇದೆ.

ತೈಲ ಸರಬರಾಜು ಸೇರಿದಂತೆ ಭಾರತದ ಜೊತೆ ಉತ್ತಮ ಸಂಬಂಧ ಹೊಂದಿರುವ ಇರಾನ್ ಜೊತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದ್ದಾರೆ. ಅಲ್ಲಿನ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಭಾನುವಾರ ಫೋನ್ ಮೂಲಕ ಸಂಭಾಷಣೆ ನಡೆಸಿದ ಮೋದಿ ಅವರು, ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ತಕ್ಷಣವೇ ಬಗೆಹರಿಸಿಕೊಳ್ಳಲು ಸಲಹೆ ನೀಡಿದ್ದಾರೆ.

ಅಮೆರಿಕ ಇರಾನ್‌ನಲ್ಲಿರುವ ಮೂರು ಪರಮಾಣು ತಾಣಗಳ ಮೇಲೆ ಬಾಂಬ್ ದಾಳಿ ನಡೆಸಿ ಸಂಘರ್ಷ ಮತ್ತೊಂದು ಹಂತಕ್ಕೇರಲು ಕಾರಣವಾದ ಕೆಲವೇ ಗಂಟೆಗಳ ನಂತರ ಮೋದಿ ಮತ್ತು ಪೆಜೆಶ್ಕಿಯಾನ್ ನಡುವೆ ಈ ಫೋನ್ ಸಂಭಾಷಣೆ ನಡೆದಿದೆ.

ಪೆಜೆಶ್ಕಿಯಾನ್ ಜೊತೆ ಚರ್ಚೆ: ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು, ಇಸ್ರೇಲ್ ಮತ್ತು ಇರಾನ್ ನಡುವಿನ ಇತ್ತೀಚಿನ ಘಟನೆಗಳ ಬಗ್ಗೆ

ತೀವ್ರ ಕಳವಳ ಉಂಟಾಗಿದೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡಿದ್ದೇನೆ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಾವಿಬ್ಬರೂ ವಿವರವಾಗಿ ಚರ್ಚಿಸಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಗಾಗಿ ಉದ್ವಿಗ್ನತೆ ಬಗೆಹರಿಸಿಕೊಳ್ಳಲು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗ ಅನುಸರಿಸಲು ಕರೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ರಷ್ಯಾದ ಬೆಂಬಲ ಕೋರಲಿರುವ ಇರಾನ್: ಸಂಘರ್ಷದಲ್ಲಿ ಮಧ್ಯಪ್ರವೇಶಿಸುವ ಮೂಲಕ ಅಮೆರಿಕವು ಇಸ್ರೇಲ್ಗೆ ಬೆಂಬಲ ನೀಡಿದೆ. ಇತ್ತ ಇರಾನ್ ಕೂಡ ತನ್ನ ಮಿತ್ರ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸುತ್ತಿದೆ. ತನ್ನ ಮೇಲಿನ ಇಸ್ರೇಲ್ ಮತ್ತು ಅಮೆರಿಕದ ದಾಳಿಗೆ ಪ್ರತಿಯಾಗಿ ರಷ್ಯಾದ ಬೆಂಬಲ ಕೋರುವ ಸಾಧ್ಯತೆ ಇದೆ.

ಪರಮಾಣು ಘಟಕಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಲು ಸೋಮವಾರ ಮಾಸ್ಕೋಗೆ ಪ್ರಯಾಣಿಸುವುದಾಗಿ ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಭಾನುವಾರ ಹೇಳಿದ್ದಾರೆ.

Leave a Comment