ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ ನಿಧನ ; ಮುಂದಿನ ಪರಮೋಚ್ಚ ಗುರುವಿನ ಆಯ್ಕೆ ಹೇಗೆ?

Coastal Bulletin
ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ ನಿಧನ ; ಮುಂದಿನ ಪರಮೋಚ್ಚ ಗುರುವಿನ ಆಯ್ಕೆ ಹೇಗೆ?

ವ್ಯಾಟಿಕನ್ ಸಿಟಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ (88) ಅವರು ನಿಧನರಾಗಿದ್ದಾರೆ ಎಂದು ವ್ಯಾಟಿಕನ್ ಸೋಮವಾರ ಘೋಷಿಸಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿರುವ ಕಾರ್ಡಿನಲ್ ಕೆವಿನ್ ಫಾರೆಲ್ ಅವರು, "ಆತ್ಮೀಯ ಸಹೋದರ, ಸಹೋದರಿಯರೇ, ಪೋಪ್ ಫ್ರಾನ್ಸಿಸ್ ಅವರು ನಿಧನರಾಗಿದ್ದಾರೆ ಎಂಬುದನ್ನು ತೀವ್ರ ದುಃಖದಿಂದ ಘೋಷಿಸಬೇಕಾಗಿದೆ. ಇಂದು (ಸೋಮವಾರ) ಬೆಳಿಗ್ಗೆ 7.35 ಕ್ಕೆ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿಸಿದ್ದಾರೆ. "ರೋಮ್‌ನ ಬಿಷಪ್ ಮತ್ತು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರಾಗಿದ್ದ ಪೋಪ್ ಅವರು ಬಡವರು, ದೀನದಲಿತರಿಗಾಗಿ ಶ್ರಮಿಸಿದವರು. ತಮ್ಮ ಇಡೀ ಜೀವನವನ್ನು ಯೇಸು ಮತ್ತು ಚರ್ಚ್‌ನ ಸೇವೆಗೆ ಸಮರ್ಪಿಸಿಕೊಂಡಿದ್ದರು. ಅವರ ನಿಷ್ಠೆ, ಧೈರ್ಯ ಮತ್ತು ಪ್ರೀತಿಯು ನಮ್ಮ ಬದುಕಿಗೆ ಪಾಠ" ಎಂದು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ನಿರಂತರ ಚಿಕಿತ್ಸೆ: ಇತ್ತೀಚೆಗೆ ಪೋಪ್ ಅವರು ಗಂಭೀರ ಅನಾರೋಗ್ಯಕ್ಕೆ ತುತ್ತಾಗಿದ್ದರು. ನಿರಂತರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದ ಬಗ್ಗೆ ಭಕ್ತರಲ್ಲಿ ತೀವ್ರ ಕಳವಳ ಮೂಡಿಸಿತ್ತು. ಫೆಬ್ರವರಿ 14ರಂದು, ಪೋಪ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರದ ದಿನಗಳಲ್ಲಿ ಅವರಲ್ಲಿ ನ್ಯುಮೋನಿಯಾ ಕಾಣಿಸಿಕೊಂಡಿತ್ತು. ರಕ್ತಹೀನತೆಯಿಂದಲೂ ಬಳಲುತ್ತಿದ್ದ ಅವರಿಗೆ ರಕ್ತ ವರ್ಗಾವಣೆ ಮಾಡಲಾಗಿತ್ತು ಎಂದು ವ್ಯಾಟಿಕನ್ ತಿಳಿಸಿತ್ತು.

ಫೆಬ್ರವರಿ 22ರಂದು, ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಬಳಿಕ ಅವರಿಗೆ ಕೃತಕ ಆಕ್ಸಿಜನ್ ಅಳವಡಿಸಲಾಗಿತ್ತು. ಶ್ವಾಸಕೋಶ ಸಮಸ್ಯೆ ಮತ್ತು ಮೂತ್ರಪಿಂಡ ವೈಫಲ್ಯಕ್ಕೆ ಗುರಿಯಾಗಿದ್ದರು. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ತಿಂಗಳುಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು.

ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಮಾರ್ಚ್ 6ರಂದು, ಅವರ ಧ್ವನಿಯ ಮೊದಲ ಬಾರಿಗೆ ಆಡಿಯೋ ಸಂದೇಶವನ್ನು ಹರಿಬಿಡಲಾಗಿತ್ತು. ಅದರಲ್ಲಿ ಅವರು "ನಾನು ನಿಮ್ಮೊಂದಿಗಿದ್ದೇನೆ" ಎಂದು ಧ್ವನಿಸಿತ್ತು. ತಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದವರಿಗಾಗಿ ಧನ್ಯವಾದ ಅರ್ಪಿಸಿದ್ದರು.

16ನೇ ಬೆನೆಡಿಕ್ಟ್ ಅವರ ರಾಜೀನಾಮೆ ಬಳಿಕ ಪೋಪ್ ಫ್ರಾನ್ಸಿಸ್ ಅವರು 2013ರಲ್ಲಿ ರೋಮ್‌ನ ಬಿಷಪ್ ಮತ್ತು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರಾಗಿದ್ದರು. ಇದೀಗ, ಅವರ ಅಗಲಿಕೆಯಿಂದ ಹೊಸ ಪೋಪ್ ಅನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಸಾಮಾನ್ಯವಾಗಿ ಮರಣದ 15ರಿಂದ 20 ದಿನಗಳ ನಡುವೆ ಹೊಸ ಪೋಪ್ ಆಯ್ಕೆ ನಡೆಯುತ್ತದೆ.

ಪೋಪ್‌ಗಳ ಆಯ್ಕೆ ಹೇಗೆ?

ವಿಶ್ವಾದ್ಯಂತ ಚರ್ಚ್‌ನ ಅತ್ಯಂತ ಹಿರಿಯ ಅಧಿಕಾರಿಗಳಾದ ಕಾಲೇಜ್ ಆಫ್‌ ಕಾರ್ಡಿನಲ್ಸ್‌ಗಳು ಪೋಪ್ ಅವರನ್ನು ಆಯ್ಕೆ ಮಾಡುತ್ತಾರೆ ಪೋಪ್ ನಿಧನದ ಅಥವಾ ರಾಜೀನಾಮೆಯ ನಂತರ, ವಿಶ್ವದೆಲ್ಲೆಡೆಯ ಕಾರ್ಡಿನಲ್‌ಗಳನ್ನು ಪಾಪಲ್ ಚುನಾವಣೆ ಅಥವಾ ಸಮಾವೇಶಕ್ಕಾಗಿ ವ್ಯಾಟಿಕನ್‌ಗೆ ಕರೆಸಲಾಗುತ್ತದೆ. ಪೋಪ್ ನಿಧನರಾದ 15 ರಿಂದ 20 ದಿನಗಳ ನಂತರ ಸಮಾವೇಶವು ಈ ಸಾಮಾನ್ಯವಾಗಿ ಪ್ರಾರಂಭವಾಗುತ್ತದೆ, ಇದರಿಂದಾಗಿ ಶೋಕಾಚರಣೆಗೆ ಸಮಯ ಸಿಗುತ್ತದೆ ಮತ್ತು ಎಲ್ಲಾ ಕಾರ್ಡಿನಲ್‌ಗಳು ರೋಮ್‌ಗೆ ಆಗಮಿಸುತ್ತಾರೆ. ಯುನೈಟೆಡ್ ಸ್ಟೇಟ್ಸ್ ಕಾನ್ಫರೆನ್ಸ್

ಆಫ್ ಕ್ಯಾಥೋಲಿಕ್ ಬಿಷಪ್‌ಗಳ ಪ್ರಕಾರ, ಪಾಪಲ್ ಚುನಾವಣೆಗಾಗಿ ಕಾರ್ಡಿನಲ್‌ಗಳನ್ನು ವ್ಯಾಟಿಕನ್‌ನಲ್ಲಿರುವ ಐತಿಹಾಸಿಕ ಸಿಸ್ಟೀನ್ ಚಾಪೆಲ್‌ನಲ್ಲಿ ಒಟ್ಟುಗೂಡಿಸಲಾಗುತ್ತದೆ.

ಬಹಳ ರಹಸ್ಯವಾಗಿ ಈ ಚುನಾವಣೆ ನಡೆಯುತ್ತದೆ. ಕಾರ್ಡಿನಲ್‌ಗಳು ರಹಸ್ಯವನ್ನು ಕಾಯ್ದುಕೊಳ್ಳುವುದಾಗಿ ಪ್ರಮಾಣ ಮಾಡುತ್ತಾರೆ. ಅಲ್ಲದೇ ಈ ವೋಟಿಂಗ್ ಸಮಯದಲ್ಲಿ ಅವರು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿರುತ್ತಾರೆ. ಅವರು ರಹಸ್ಯವಾದ ಅಂದರೆ ಹೊರ ಜಗತ್ತಿನೊಂದಿಗೆ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಮತ ಚಲಾಯಿಸುತ್ತಾರೆ ಮತ್ತು ಮಲಗುತ್ತಾರೆ ಮತ್ತು ವೈದ್ಯಕೀಯ ತುರ್ತು ಸಂದರ್ಭಗಳನ್ನು ಹೊರತುಪಡಿಸಿ, ಹೊರಗಿನ ಪ್ರಪಂಚದೊಂದಿಗೆ ಅವರಿಗೆ ಯಾವುದೇ ಸಂಪರ್ಕವನ್ನು ಹೊಂದಲು ಅವಕಾಶವಿಲ್ಲ. ಮೊಬೈಲ್ ಫೋನ್‌ಗಳು, ರೇಡಿಯೋಗಳು, ದೂರದರ್ಶನ ಮತ್ತು ಪತ್ರಿಕೆಗಳು ಹೀಗೆ ಎಲ್ಲಾ ಸಂವಹನ ಮಾಧ್ಯಮಗಳನ್ನು ಅವರಿಗೆ ನಿಷೇಧಿಸಲಾಗುತ್ತದೆ.. ಬಿಬಿಸಿ ಪ್ರಕಾರ ಇವರಿರುವ ಮನೆಯ ಮನೆಗೆಲಸದವರು ಮತ್ತು ಭದ್ರತಾ ಸಿಬ್ಬಂದಿಗಳು ಸಹ ಶಾಶ್ವತ ಗೌಪ್ಯತೆಯನ್ನು ಪಾಲಿಸುವುದಾಗಿ ಪ್ರತಿಜ್ಞೆ ಮಾಡುತ್ತಾರೆ.

ಮತದಾನವನ್ನು ಬಹಳ ರಹಸ್ಯವಾಗಿ ಮಾಡಲಾಗುತ್ತದೆ. ಸಿಎನ್‌ಎನ್‌ ವರದಿಯ ಪ್ರಕಾರ, ಕಾರ್ಡಿನಲ್‌ಗಳು ತಾವು ಆಯ್ಕೆ ಮಾಡಿದ ಅಭ್ಯರ್ಥಿಯ ಹೆಸರನ್ನು "ಎಲಿಗೊ ಇನ್ ಸಮ್ಮುನ್ ಪಾಂಟಿಫಿಸೆಮ್ ಎನ್ನುತ್ತಾರೆ ಲ್ಯಾಟಿನ್ ಭಾಷೆಯಲ್ಲಿ ಇದರರ್ಥ ನಾನು ಸರ್ವೋಚ್ಚ ಪೋಪ್ ಆಯ್ಕೆ ಮಾಡುತ್ತೇನೆ ಎಂದು ಅಭ್ಯರ್ಥಿಯ ಹೆಸರಿನ ಕೆಳಗೆ ಬರೆಯುತ್ತಾರೆ.ಈ ಕಾರ್ಡಿನಲ್‌ಗಳು ವೋಟು ಹಾಕಿದ ನಂತರ ಈ ವೋಟುಗಳನ್ನು ಮಿಶ್ರ ಮಾಡಿ ಎಣಿಕೆ ಮಾಡಲಾಗುತ್ತದೆ. ಪೋಪ್‌ ಆಗಿ ಆಯ್ಕೆಯಾಗಬೇಕಾದ ವ್ಯಕ್ತಿಯೂ ಕನಿಷ್ಠ ಮೂರನೇ ಎರಡರಷ್ಟು ಮತ ಪಡೆಯಬೇಕಾಗಿರುತ್ತದೆ.

Leave a Comment