ವಾಷಿಂಗ್ಟನ್ ಡಿಸಿ, ಅಮೆರಿಕ: ಅಮೆರಿಕದ ದಾಳಿಯಿಂದ ಇರಾನ್‌ನ ಸೇನೆ ತೀವ್ರವಾಗಿ ಹಾನಿಗೊಳಗಾಗಿದ್ದು, ಅದನ್ನು ಪುನರ್ನಿರ್ಮಿಸಲು ಒಂದು ದಶಕ ಬೇಕಾಗುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ.
ಏರ್ ಫೋರ್ಸ್ ಒನ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ಸಂಘರ್ಷ ಮುಗಿದಿದೆ ಎಂದು ಘೋಷಿಸಲು ಸಿದ್ಧರಿದ್ದೀರಾ ಎಂದು ಕೇಳಿದಾಗ, ಅವರು ನಾಶವಾಗಿದ್ದಾರೆ ಎಂದು ನಾನು ಹೇಳುತ್ತೇನೆ. ಆದರೆ, ನಾನು ಇನ್ನೂ ಹಾಗೆ ಮಾಡಿಲ್ಲ. ಈಗಾಗಲೇ ನಾವು ಅವರಿಗೆ ಬಹಳಷ್ಟು ಹಾನಿ ಮಾಡಿದ್ದೇವೆ ಎಂದು ಭಾವಿಸಿತ್ತೇವೆ. ನಾವು ಈಗಲೇ ಹೊರಟುಹೋದರೂ ಕೂಡಾ, ಇರಾನ್ ಪುನರ್ನಿರ್ಮಿಸಲು 10 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ ನಾವಿನ್ನೂ ಯುದ್ಧವನ್ನು ಕೊನೆಗೊಳಿಸುವುದಾಗಿ ಘೋಷಿಸುತ್ತಿಲ್ಲ ಎಂದಿದ್ದಾರೆ.
ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳು ಮೂಲಭೂತವಾಗಿ ಇರಾನ್ ಸೋಲಿಸಿವೆ ಎಂದು ಇದೇ ವೇಳೆ ಅಮೆರಿಕ ಅಧ್ಯಕ್ಷರು ಹೇಳಿಕೊಂಡರು. ನನ್ನ ಮಟ್ಟಿಗೆ ಹೇಳುವುದಾದರೆ, ನಾವು ಮೂಲಭೂತವಾಗಿ ಇರಾನ್ ಸೋಲಿಸಿದ್ದೇವೆ. ಅವರು ಸ್ವಲ್ಪಮಟ್ಟಿಗೆ ಹೋರಾಡಬಹುದು ಎಂದು ನಾನು ಭಾವಿಸುತ್ತೇನೆ. ಆದರೆ ಹೆಚ್ಚು ಅಲ್ಲ ಎಂದರು. ನಿಮಗೆ ತಿಳಿದಿರುವಂತೆ ನಾವು ಅವರ ವಾಯುಪಡೆಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದೇವೆ. ಅವರ ವಾಯು ರಕ್ಷಣೆಯನ್ನು ಬಹುತೇಕ ನಾಶಮಾಡಿದ್ದೇವೆ. ಅವರಿಗೀಗ ಯಾವುದೇ ವಾಯು ರಕ್ಷಣೆ ಇಲ್ಲ ಎಂದು ಟ್ರಂಪ್ ಹೇಳಿದರು. ಇಸ್ರೇಲ್ - ಅಮೆರಿಕ ಜಂಟಿ ದಾಳಿಯಲ್ಲಿ ಅನೇಕ ಹಿರಿಯ ನಾಯಕರನ್ನು ನಾವು ಕೊಂದಿದ್ದೇವೆ ಎಂದು ಅವರು ಹೇಳಿದರು.
ಖಾರ್ಗ್ ದ್ವೀಪದಲ್ಲಿರುವ ಇರಾನ್‌ನ ಪ್ರಮುಖ ತೈಲ ರಫ್ತು ಸೌಲಭ್ಯದ ಮೇಲೆ ಅಮೆರಿಕದ ದಾಳಿಗಳನ್ನು ಟ್ರಂಪ್ ಇದೇ ವೇಳೆ ಉಲ್ಲೇಖಿಸಿದರು.
ವಾಷಿಂಗ್ಟನ್ ಇನ್ನೂ ಹೆಚ್ಚಿನ ಹಾನಿಯನ್ನುಂಟುಮಾಡಬಹುದು ಎಂದೂ ಇದೇ ವೇಳೆ ಅವರು ಹೇಳಿದರು. ನಾವು ಖಾರ್ಗ್ ದ್ವೀಪದ ಮೇಲೆ ದಾಳಿ ಮಾಡಿದೆವು. ಮತ್ತು ಅಲ್ಲಿ ಕೇವಲ ಒಂದು ಸಣ್ಣ ಪ್ರದೇಶ ಮಾತ್ರ ಉಳಿದಿತ್ತು. ನಾವೀಗ ಎಲ್ಲವನ್ನೂ ಲಾಕ್ ಮಾಡಿ ಲೋಡ್ ಮಾಡಿದ್ದೇವೆ. ತೈಲಾಗಾರಗಳ ಮೇಲೆ ದಾಳಿ ಮಾಡದಿರಲು ನಿರ್ಧರಿಸಿದ್ದೇವೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡೋಣ ಎಂದರು. ಇರಾನ್ ಅಮೆರಿಕದೊಂದಿಗೆ ಮಾತುಕತೆ ನಡೆಸಲು ಬಯಸುತ್ತಿದೆ ಎಂದು ಟ್ರಂಪ್ ಇದೇ ವೇಳೆ ಹೇಳಿದರು.
ಟ್ರಂಪ್ ಹೇಳಿಕೆ ತಿರಸ್ಕರಿಸಿದ ಅರಘ್ಚಿ: ಈ ಬಗ್ಗೆ ಮಾತನಾಡಿರುವ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಕದನ ವಿರಾಮವನ್ನು ಬಯಸುತ್ತಿದೆ ಎಂಬ ಹೇಳಿಕೆಯನ್ನು ತಿರಸ್ಕರಿಸಿದರು. ಇರಾನ್ ಸಾಧ್ಯವಾದಷ್ಟು ಕಾಲ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಿದ್ಧವಾಗಿದೆ ಎಂದು ಅವರು ತಿಳಿಸಿದರು. ಗಲ್ಫ್ ದೇಶಗಳಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ನಡೆಸಲಾದ ದಾಳಿಗಳನ್ನು ಅವರು ಸಮರ್ಥಿಸಿಕೊಂಡು ಮಾತನಾಡಿದರು ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ಅಮೆರಿಕ ತನ್ನ ಅಕ್ರಮ ಯುದ್ಧವನ್ನು ಕೊನೆಗೊಳಿಸುವವರೆಗೆ ಟೆಹ್ರಾನ್ ಮಿಲಿಟರಿ ಕ್ರಮವನ್ನು ಮುಂದುವರಿಸುತ್ತದೆ ಎಂದು ಅರಘ್ಚಿ ಹೇಳಿದರು. ಇಲ್ಲ, ನಾವು ಎಂದಿಗೂ ಕದನ ವಿರಾಮವನ್ನು ಕೇಳಿಲ್ಲ, ಮತ್ತು ನಾವು ಎಂದಿಗೂ ಮಾತುಕತೆಗೆ ಬನ್ನಿ ಎಂದು ಕೇಳಿಲ್ಲ. ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಸಿದ್ಧರಿದ್ದೇವೆ ಎಂದು ಅರಘ್ಚಿ ಹೇಳಿದ್ದಾರೆ.















