ಢಾಕಾ: ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರ ಪಕ್ಷದ 7 ನಾಯಕರಿಗೆ ಕೋರ್ಟ್ ಮರಣದಂಡನೆ ವಿಧಿಸಿದೆ.
2024ರ ದಂಗೆಯನ್ನು ಹತ್ತಿಕ್ಕಲು ಯತ್ನಿಸಿದ ಪ್ರಕರಣದಲ್ಲಿ ಬಾಂಗ್ಲಾದೇಶದ ನ್ಯಾಯಾಲಯ ಮಂಗಳವಾರ ಹಸೀನಾ ಪಕ್ಷದ ಇಬ್ಬರು ಮಾಜಿ ಸಚಿವರು ಸೇರಿದಂತೆ ಏಳು ಹಿರಿಯ ನಾಯಕರಿಗೆ ಮರಣದಂಡನೆ ವಿಧಿಸಿತು.
ಬಾಂಗ್ಲಾದಲ್ಲಿ ಧಂಗೆಯಿಂದ ಅಧಿಕಾರ ಕಳೆದುಕೊಂಡ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ 7 ಸದಸ್ಯರನ್ನು, ಕೊಲೆ ಹಾಗೂ ಹತ್ಯೆಗಳಿಗೆ ಪ್ರಚೋದನೆ ಸೇರಿದಂತೆ ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ತಪ್ಪಿತಸ್ಥರೆಂದು ಕೋರ್ಟ್ ಘೋಷಿಸಿದೆ.
ಶಿಕ್ಷೆಗೆ ಒಳಗಾದವರಲ್ಲಿ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಒಬೈದುಲ್ ಕ್ವಾದರ್ ಹಾಗೂ ಮಾಜಿ
ಸಚಿವ ಮೊಹಮ್ಮದ್ ಅಲಿ ಅರಾಫತ್ ಸೇರಿದ್ದಾರೆ. ನ್ಯಾಯಮೂರ್ತಿ ನಜ್ರುಲ್ ಇಸ್ಲಾಂ ಚೌಧರಿ ನೇತೃತ್ವದ ಮೂವರು ಸದಸ್ಯರ ನ್ಯಾಯಮಂಡಳಿಯು ಇವರಿಗೆ ಶಿಕ್ಷೆ ವಿಧಿಸಿತು.
ವಿಶ್ವಸಂಸ್ಥೆಯ ಪ್ರಕಾರ, 2024ರ ಜುಲೈ ಮತ್ತು ಆಗಸ್ಟ್ ನಡುವೆ ಹಸೀನಾ ಅವರ ಸರ್ಕಾರವು ವಿದ್ಯಾರ್ಥಿ ನೇತೃತ್ವದ ದಂಗೆಯನ್ನು ಹತ್ತಿಕ್ಕಲು ಪ್ರಯತ್ನಿಸಿದಾಗ 1,400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
ಹಸೀನಾ ಅವರ 15 ವರ್ಷಗಳ ಆಳ್ವಿಕೆಯು 2024ರ ಆಗಸ್ಟ್‌ನಲ್ಲಿ ಅಂತ್ಯಗೊಂಡಿತು. ಆ ಸಮಯದಲ್ಲಿ ಅವರು ಹೆಲಿಕಾಪ್ಟರ್ ಮೂಲಕ ನೆರೆಯ ಭಾರತಕ್ಕೆ ಪಲಾಯನ ಮಾಡಿದರು. ಈಗ ಭಾರತದಲ್ಲೇ ಅಜ್ಞಾತವಾಸದಲ್ಲಿದ್ದಾರೆ














