ಬುದ್ಗಾಮ್ : ಕಾಶ್ಮೀರ ಪಂಡಿತರ ಮೇಲೆ ಕಣಿವೆ ಪ್ರದೇಶದಲ್ಲಿ ದಾಳಿ ಮುಂದುವರಿದಿದ್ದು, ಗುರುವಾರ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ವ್ಯಕ್ತಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಬುದ್ಗಾಮ್ ಜಿಲ್ಲೆಯ ಚಾದೂರ ಗ್ರಾಮದ ತಹಶೀಲ್ದಾರ್ ಕಚೇರಿಯಲ್ಲಿ ರಾಹುಲ್ ಭಟ್ ಎಂಬಾತನ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ರಾಹುಲ್ ಭಟ್ ಸಾವನ್ನಪ್ಪಿರುವ ಘಟನೆ ನಡೆದಿದೆ.
ದಾಳಿಯನ್ನು ಕಾಶ್ಮೀರ ವಲಯದ ಪೊಲೀಸರು ಖಚಿತಪಡಿಸಿದ್ದು, ಭಯೋತ್ಪಾದಕರು ಅಲ್ಪಸಂಖ್ಯಾತ ಸಮುದಾಯದ ರಾಹುಲ್ ಭಟ್ ಎಂಬ ನೌಕರನ ಮೇಲೆ ಚಾದೂರ ತಹಶೀಲ್ದಾರ್ ಕಚೇರಿಯಲ್ಲಿ
ಗುಂಡಿನ ದಾಳಿ ನಡೆಸಿದ್ದಾರೆ. ಸದ್ಯ ಗಾಯಗೊಂಡಿರುವ ರಾಹುಲ್ ಭಟ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದರು. ಸದ್ಯದ ಮಾಹಿತಿಯಂತೆ ರಾಹುಲ್ ಭಟ್ ಸಾವನ್ನಪ್ಪಿದ್ದಾನೆ.
ಬುದ್ಗಾಮ್ ಜಿಲ್ಲೆಯ ಚಾದೂರ ತಹಶೀಲ್ದಾರ್ ಕಚೇರಿಯಲ್ಲಿ ರಾಹುಲ್ ಭಟ್ ಕೆಲಸ ಮಾಡುತ್ತಿದ್ದರು. ಈ ವೇಳೆ ಸರ್ಕಾರಿ ಕಚೇರಿಗೆ ನುಗ್ಗಿದ ಇಬ್ಬರು ಉಗ್ರರು ರಾಹುಲ್ ಭಟ್ ತಲೆಗೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.














