ಇಸ್ಲಾಮಾಬಾದ್: ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದ ಕಡಲ ತೀರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಬೃಹತ್ ಸಂಗ್ರಹ ಪತ್ತೆಯಾಗಿದೆ.
ಪಾಕಿಸ್ತಾನವು ಭೂವೈಜ್ಞಾನಿಕ ಸಮೀಕ್ಷೆಯ ಮೂಲಕ ಸಂಗ್ರಹ ಸ್ಥಳವನ್ನು ಗುರುತಿಸಲಾಗಿದೆ ಎಂದು ಪತ್ತೆಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಇಲಾಖೆಗಳು ಸರ್ಕಾರಕ್ಕೆ ತಿಳಿಸಿವೆ. ಆದರೆ, ಈಗಲೇ ಈ ಸಂಗ್ರಹವನ್ನು ಬಳಸಿಕೊಳ್ಳುವುದು ಸುಲಭವಲ್ಲ, ತೈಲ ಹೊರ ತೆಗೆಯುವ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಹಲವು ವರ್ಷ ಬೇಕಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ನೈಸರ್ಗಿಕ ಅನಿಲದ ಸಂಗ್ರಹವು ಎಷ್ಟು ಅಗಾಧವಾಗಿದೆ ಎಂದರೆ ದೇಶದ ಭವಿಷ್ಯವನ್ನು ಬದಲಾಯಿಸಬಹುದು. ಇದು ಪಾಕ್ ಮಿತ್ರ ರಾಷ್ಟ್ರದ ಸಹಯೋಗದೊಂದಿಗೆ ಮೂರು
ವರ್ಷ ನಡೆಸಿದ ಪ್ರಯತ್ನದ ಫಲಯಾಗಿ ಗೋಚರವಾಗಿದೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ದೇಶದ ಇಂಧನ ಅಗತ್ಯತೆ ಪೂರೈಸಲು ಈ ನಿಕ್ಷೇಪಗಳು ಸಾಕಾಗುತ್ತವೆಯೇ ಎಂಬ ಪ್ರಶ್ನೆಗೆ, ಇದನ್ನು ಹೊರತೆಗೆಯಲು 5 ಬಿಲಿಯನ್ ಅಮೆರಿಕಾ ಡಾಲರ್ ಹೂಡಿಕೆ ಅಗತ್ಯವಿದೆ. ಸರ್ಕಾರ ಇತ್ತ ಗಮನಹರಿಸಿದರೂ ಸಂಗ್ರಹ ಹೊರತೆಗೆಯಲು ಐದು ವರ್ಷ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಇನ್ನು ಕೆಲವೇ ವರ್ಷಗಳಲ್ಲಿ ಅರಬ್ ದೇಶಗಳಂತೆ ಶ್ರೀಮಂತ ದೇಶವಾಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
















