ಭ್ರೂಣ ಹತ್ಯೆ ಪ್ರಕರಣ ಹಲವು ಕಡೆ ಆರೋಗ್ಯ ಅಧಿಕಾರಿಗಳಿಂದ ದಾಳಿ,ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ಸೀಜ್. ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆಯ ಮಾಹಿತಿ ನೀಡಿದವರಿಗೆ ಬಹುಮಾನದ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಸರಕಾರ ಚಿಂತನೆ.

Coastal Bulletin
ಭ್ರೂಣ ಹತ್ಯೆ ಪ್ರಕರಣ ಹಲವು ಕಡೆ ಆರೋಗ್ಯ ಅಧಿಕಾರಿಗಳಿಂದ ದಾಳಿ,ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ಸೀಜ್. ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆಯ ಮಾಹಿತಿ ನೀಡಿದವರಿಗೆ ಬಹುಮಾನದ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಸರಕಾರ ಚಿಂತನೆ.

ಬೆಂಗಳೂರು: ಮಂಡ್ಯದಲ್ಲಿ ನಡೆದಿದ್ದ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣ ಭಾರೀ ಸದ್ದು ಮಾಡಿದ್ದು, ಇದೀಗ ಇದರ ಬೆನ್ನಲ್ಲೇ ರಾಜ್ಯದ ವಿವಿಧೆಡೆ ಆರೋಗ್ಯ ಇಲಾಖೆ ಅಧಿಕಾರುಗಳು ದಾಳಿ ನಡೆಸಿ ಪರಿಶೀಲನೆ ಆರಂಭಿಸಿದ್ದಾರೆ. ಮೊನ್ನೆಯಷ್ಟೇ ಬಳ್ಳಾರಿಯಲ್ಲಿ ಇಂತಹ ದಾಳಿ ನಡೆದಿದ್ದು, ನಿನ್ನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಧಿಕಾರಿಗಳು ಸ್ಪೆಷಲ್ ಡ್ರೈವ್ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಆರೋಗ್ಯ ಇಲಾಖೆಯಿಂದ ದಾಳಿ ನಡೆಸಿದ್ದಾರೆ. ಈ ವೇಳೆ ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ದೇವನಹಳ್ಳಿಯ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳ ಮೇಲೆ ದಾಳಿ ನಡೆದಿದ್ದು, ನೆಲಮಂಗಲದಲ್ಲಿ 5 ಕ್ಲಿನಿಕ್, ದೊಡ್ಡಬಳ್ಳಾಪುರದ ಒಂದು ಕ್ಲಿನಿಕ್ ಸೀಜ್ ಮಾಡಲಾಗಿದೆ. ಇವು ಪರವಾನಿಗೆ ಇಲ್ಲದೇ ನಡೆಸುತ್ತಿದ್ದ ಕ್ಲಿನಿಕ್​ಗಳಾಗಿದ್ದರಿಂದ ಅಧಿಕಾರಿಗಳು ಅದನ್ನು ಬಂದ್ ಮಾಡಿಸಿದ್ದಾರೆ. ಇದೇ ವೇಳೆ ಭ್ರೂಣ ಪತ್ತೆ ಮಾಡುತ್ತಿದ್ದ ಆಸ್ಪತ್ರೆ ಮೇಲೆಯೂ ದಾಳಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿಯಲ್ಲಿ ಮೈಸೂರು ಮಾದರಿಯಲ್ಲಿ ಮತ್ತೊಂದು ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ದಾಖಲಾತಿ ಪರಿಶೀಲನೆಗೆ ಬಂದಿದ್ದ ‌ವೇಳೆ ಲೈವ್​ನಲ್ಲಿ ಭ್ರೂಣ ಹತ್ಯೆ ಪತ್ತೆ ಆಗಿದೆ. ಆಸ್ಪತ್ರೆಯಲ್ಲಿ 5 ತಿಂಗಳ ಗರ್ಭಿಣಿಗೆ ಗರ್ಭಪಾತ ಮಾಡಿ ಭ್ರೂಣ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಭ್ರೂಣ ಹತ್ಯೆ ಹಿನ್ನೆಲೆ ಎಸ್​ಪಿಜಿ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಆಸ್ಪತ್ರೆ ಸೀಜ್  ಮಾಡಲಾಗಿದೆ. ಸದ್ಯ ಎಸ್​ಪಿಜಿ ಆಸ್ಪತ್ರೆಯಲ್ಲಿನ ರೋಗಿಗಳನ್ನು ಅವರಿಗೆ ಬೇಕಾದ ಆಸ್ಪತ್ರೆಗಳಿಗೆ ಸಿಬ್ಬಂದಿ ಕಳಿಹಿಸಿದ್ದಾರೆ. ಮಕ್ಕಳ ಜೊತೆ ಆಟೋ, ಬೈಕ್​ನಲ್ಲಿ ರೋಗಿಗಳು ಬೇರೆ

ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮಂಡ್ಯ- ಮೈಸೂರು ಭಾಗದಲ್ಲಿ ಭ್ರೂಣ ಲಿಂಗ ಪತ್ತೆ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಎಚ್ಚೆತ್ತಿರುವ ರಾಜ್ಯ ಸರ್ಕಾರ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವ ಮಾಹಿತಿದಾರರಿಗೆ ಈಗಿರುವ 50 ಸಾವಿರ ರು. ಬಹುಮಾನದ ಮೊತ್ತವನ್ನು 1 ಲಕ್ಷ ರು.ಗಳಿಗೆ ಹೆಚ್ಚಿಸುವುದಾಗಿ ಹೇಳಿದೆ. ಅಲ್ಲದೆ, ಇಂತಹ ಪ್ರಕರಣಗಳು ಮರುಕಳಿಸದಂತೆ ತಡೆಯಲು ರಾಜ್ಯಮಟ್ಟದಲ್ಲಿ ವಿಶೇಷ ಕಾರ್ಯಪಡೆ ರಚಿಸುವುದು ಹಾಗೂ ತಮಿಳುನಾಡು ಮಾದರಿಯಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಲು ಆಲೋಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

Leave a Comment