ಚಿಕ್ಕ ಮಗಳೂರು :ಫೇಸ್‌ಬುಕ್‌ನಲ್ಲಿ ಪರಿಚಯವಾಗಿ, ಪರಿಚಯ ಪ್ರೀತಿಯಾಗಿ 20 ವರ್ಷದ ಯುವತಿಯೊಬ್ಬಳು 17 ವರ್ಷದ ಬಾಲಕನನ್ನು ಮದುವೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.
ಬೆಂಗಳೂರು ಮೂಲದ 20 ವರ್ಷದ ಯುವತಿ ಮಡಿಕೇರಿಯ ವಿರಾಜಪೇಟೆಯಲ್ಲಿ ನರ್ಸಿಂಗ್ ಮಾಡುತ್ತಿದ್ದರು. ಈ ಸಮಯದಲ್ಲಿ ಕಡೂರು ತಾಲೂಕಿನ ಬ್ರಹ್ಮಸಮುದ್ರ ಗ್ರಾಮದ 17 ವರ್ಷದ ಬಾಲಕನ ಜೊತೆ ಫೇಸ್‌ಬುಕ್ ಮೂಲಕ ಸ್ನೇಹವಾಗಿತ್ತು.ಇಬ್ಬರೂ ವಿವಾಹವಾಗಲು ನಿರ್ಧರಿಸಿ ಹುಡುಗಿ ಮನೆಯವರಿಗೆ ವಿಷಯ ತಿಳಿಸಿದಾಗ ಆಕೆಯ ಪೋಷಕರು ವಿವಾಹಕ್ಕೆ ಸಮ್ಮತಿ ನೀಡಿಲ್ಲ. ಆದರೆ ಹುಡುಗನ ತಾಯಿ ಸಂಬಂಧಿಕರ ಜೊತೆ ಸೇರಿ ಬ್ರಹ್ಮಸಮುದ್ರ ಗ್ರಾಮದ ಅಂತರಘಟ್ಟಮ್ಮನ ದೇವಸ್ಥಾನದಲ್ಲಿ ಜೂನ್ 16ರಂದು ಮದುವೆ
ಮಾಡಿದ್ದಾರೆ. ಈ ಬಗ್ಗೆ ಮಕ್ಕಳ ಸಹಾಯವಾಣಿಗೆ ಜೂನ್ 23 ರಂದು ಮಾಹಿತಿ ದೊರೆತಿದೆ.ಬಾಲಕ ಆಕೆಗೆ ನನಗೆ 21 ವರ್ಷ ಎಂದು ಹೇಳಿಕೊಂಡಿದ್ದನು. ಮಾಹಿತಿ ದೊರೆತ ಬಳಿಕ ಸಖರಾಯಪಟ್ಟಣ ಪೊಲೀಸರೊಡನೆ ಅಂಗನವಾಡಿ ಮೇಲ್ವಿಚಾರಕಿ,ಮಕ್ಕಳ ಸಹಾಯವಾಣಿ ಸ್ಥಳಕ್ಕೆ ಭೇಟಿ ನೀಡಿ ಯುವತಿಯನ್ನ ವಶಕ್ಕೆ ಪಡೆದಿದ್ದಾರೆ. ಆಕೆಯ ಮತ್ತು ಬಾಲಕನ ತಾಯಿ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಕೊರೊನಾ ನಿಯಮ ಉಲ್ಲಂಘನೆ ಪ್ರಕರಣದಡಿ ಕೇಸ್ ದಾಖಲಿಸಿದ್ದಾರೆ.















