ನ್ಯೂಯಾರ್ಕ್ :ಇತ್ತೀಚೆಗಷ್ಟೇ ವೆಬ್ ಆವೃತ್ತಿಯ ಮುಖಪುಟದಲ್ಲಿ ಟ್ವಿಟ್ಟರ್‌ನ ಲೋಗೊವನ್ನು ನಾಯಿ ಚಿಹ್ನೆಗೆ ಬದಲಾಯಿಸಿದ್ದ ಎಲನ್ ಮಸ್ಕ್, ಇದೀಗ ಮತ್ತೆ ಹಳೆಯ ನೀಲಿ ಹಕ್ಕಿಯ ಚಿತ್ರವನ್ನೇ ಆ ಜಾಗಕ್ಕೆ ತಂದಿದ್ದಾರೆ. ಟ್ವಿಟ್ಟರ್ ಮೂಲ ಲೋಗೋ ಬದಲಾವಣೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ ಮೊಬೈಲ್ ಆವೃತ್ತಿಯಲ್ಲಿ ಲೋಗೋ ಬದಲಾವಣೆ ಆಗಿರಲಿಲ್ಲ.
ಈಗ ನೀಲಿ ಹಕ್ಕಿ (Blue Bird) ವೆಬ್ ಆವೃತ್ತಿಯಲ್ಲಿ ಮತ್ತೆ ಕಾಣಿಸಿಕೊಂಡಿದ್ದಕ್ಕೆ ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಎಲಾನ್ ಮಸ್ಕ್ ತನ್ನ ಮತ್ತು ಅನಾಮಧೇಯ ವ್ಯಕ್ತಿಯ ನಡುವೆ ಸಂಭಾಷಣೆ ನಡೆದಿತ್ತು. ಅದರಲ್ಲಿ ವ್ಯಕ್ತಿಯು ನಾಯಿಯನ್ನು ಟ್ವಿಟ್ಟರ್‌ನ ಲೋಗೋವಾಗಿ ಮಾಡುವಂತೆ ಎಲಾನ್ ಮಸ್ಕ್‌ಗೆ ಸಲಹೆ ನೀಡಿದ್ದರು. ಅವರಿಗೆ ಎಲಾನ್ ಮಸ್ಕ್ ಭರವಸೆ ನೀಡಿದ್ದರು.
ಹೀಗಾಗಿ 4 ದಿನದ ಮಟ್ಟಿಗೆ ನಾಯಿ ಚಿತ್ರ ಕಾಣಿಸಿಕೊಂಡಿತ್ತು ಎನ್ನಲಾಗಿದೆ.
ಟ್ವಿಟ್ಟರ್ ಖರೀದಿಸಿದ ಬಳಿಕ ಅದರಲ್ಲಿ ನಾನಾ ಬದಲಾವಣೆಗಳನ್ನು ಮಾಡಿರುವ ಉದ್ಯಮಿ ಎಲಾನ್ ಮಸ್ಕ್ ಟ್ವಿಟ್ಟರ್‌ನ ಚಿಹ್ನೆಯಾದ ಹಾರುವ ಹಕ್ಕಿ ಬದಲಿಗೆ ನಾಯಿಯನ್ನು ಪ್ರತಿಷ್ಠಾಪಿಸಿದ್ದರು. ಮಂಗಳವಾರ ವೆಬ್‌ಸೈಟ್ ಮೂಲಕ ಪ್ರವೇಶಿಸಿದ ಟ್ವಿಟ್ಟರ್ ಬಳಕೆದಾರರಲ್ಲಿ ಈ ಬದಲಾವಣೆ ಗೋಚರಿಸಿತ್ತು. ಆದರೆ ಮೊಬೈಲ್ ಆ್ಯಪ್‌ಗಳಲ್ಲಿ ಹಕ್ಕಿಯ ಚಿಹ್ನೆಯೇ ಮುಂದುವರೆದಿತ್ತು.














