Coastal Bulletin

ಕವನ

ಹೇಗೆ ಮರೆಯಲಿ ಎಂತು ಮರೆಯಲಿ

ಸಂಭ್ರಮ ತಂದಂತಹ ದೀಪಾವಳಿ?

ಅಂದು ನೀನು ಹಚ್ಚಿದ ಹಣತೆಯು

ಬೆಳಗುತಲಿಹುದು ಇಂದಿಗೂ ಎದೆಯಲ್ಲಿ!!


ಕಂಡ ಒಡನೆಯೆ ಸೆಳೆದಿಹುದೆನ್ನನು

ಕಣ್ಣ‌ಕೊನೆಯ ನಕ್ಷತ್ರ ಕಡ್ಡಿಯ ಮಿನುಗು!

ಎನ್ನಳೊಗೀಗಲೂ ಪ್ರತಿಧ್ವನಿಸುತಿಹುದು

ಪ್ರೇಮಲಾಪದ ಹೊಸ ಗುನುಗು!!


ರಂಗೋಲಿ ಬರೆಯುತ್ತಾ ದಂಗಾಗಿ ನೋಡಿದೆ

ಉಲ್ಲಾಸದ ಕಾರಂಜಿ ಪುಟಿದಿತ್ತು ಆಗ!

ಮಾವು ಹೂವುಗಳ ತೋರರಣವು ಪಟಪಟಿಸಿ 

ಸಾರಿದವು

ಉಸಿರು ಉಮ್ಮಳದ ವೇಗ!


ಹಣತೆಯನು ಹಚ್ಚುತ್ತಾ ಮುತ್ತೊಂದು ತೇಲಿತ್ತು

ಮೆಲುವಾಗಿ ಬೀಸಿದ ತಂಗಾಳಿಯಲಿ ತೇಲಿ!

ಮುತ್ತಿನಾ ಮತ್ತಿನಲಿ ಹಗುರಾದ ಹೃದಯದೊಳು

ಸಾವಿರ ಹಣತೆಗಳು ಬೆಳಗಿ ದೀಪಾವಳಿ!!


ಎಣ್ಣೆ ಬತ್ತಿಗಳು ಒಂದಾಗಿ ಉರಿಯುತಲಿ

ಇಂದಿಗೂ ಬೆಳಕನ್ನು ಎರಚುತ್ತಿಹುದು!

ಕೊಳೆಯನ್ನು ತೊಳೆಯುತಲಿ ಬೆಸಗೊಂಡ ಬಾಳಿನಲಿ

ಮಮತೆಯ ತೈಲವು ಬತ್ತದು ಎಂದೆಂದೂ!

ಲೇಖನ : ವಿಶ್ವನಾಥ ಕುಲಾಲ್ ಮಿತ್ತೂರು

Leave a Comment