ಇಂದಿನ ಪರಿಸ್ಥಿತಿಯಲ್ಲಿ ಮೊಬೈಲ್ ಫೋನ್ ಎನ್ನುವುದು ಯುವ ಪೀಳಿಗೆಯ ಮೇಲೆ ದಾಳಿ ಮಾಡುತ್ತಾ ಇದೆ. ಪೋಷಕರು ಇನ್ನೂ ತಮ್ಮ ಮಕ್ಕಳ ಕುರಿತಾಗಿ ಜಾಗೃತರಾಗದಿದ್ದರೆ ಮುಂದಕ್ಕೆ ಅಪಾಯವನ್ನು ಎದುರಿಸಬೇಕಾಗುತ್ತದೆ. ಮಕ್ಕಳಿಗೆ ಮಾನವೀಯತೆಯನ್ನು ಕಲಿಸುವ ಜವಾಬ್ದಾರಿ ಹಿರಿಯರ ಮೇಲಿದೆ. ಒಂದು ಮಾದರಿ ವಿದ್ಯಾಸಂಸ್ಥೆ ಮಕ್ಕಳಲ್ಲಿ ಶಿಸ್ತು-ವಿನಯ, ಮಂದಹಾಸವನ್ನು ಮೂಡಿಸಿ ಲವಲವಿಕೆಯಿಂದ ಇರಲು ಏನೆಲ್ಲಾ ಮಾಡಬಹುದು ಎನ್ನುವುದನ್ನು ಗ್ರಾಮೀಣ ಪ್ರದೇಶದ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆ ತೋರಿಸಿಕೊಟ್ಟಿದೆ ಎಂಬುದಾಗಿ ಮೂಡಬಿದ್ರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಸದಾಕತ್ ಹೇಳಿದರು.
ಅವರು ತುಂಬೆಯ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಮುಖ್ಯ ಅತಿಥಿ ಕಿತ್ತೂರ್ ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕತ ವಕೀಲೆ ಶೈಲಜಾ ರಾಜೇಶ್ ಮಾತನಾಡಿ ಇಂದಿನ ದಿನ ಸಂಸ್ಕಾರವನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ತಾಯಿಯಾದವಳು ತನ್ನ ಹೃದಯದಲ್ಲಿ ಶಿಕ್ಷಕಿಯ ಗುಣವನ್ನು ಇರಿಸಿಕೊಂಡು ಒಳ್ಳೆಯ ಸಂಸ್ಕಾರವನ್ನು ತನ್ನ ಮಕ್ಕಳಿಗೆ ಕಲಿಸಿ ಕೊಡಬೇಕಾಗಿದೆ. ಕೇವಲ ಪಾಠದ ಕಲಿಕೆಯು ವ್ಯಕ್ತಿಯನ್ನು ಒಯ್ಯಲಾರದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಕಲಾವಿದ ಸದಾಶಿವ ಡಿ. ತುಂಬೆ ಅವರು ತುಂಬೆ ವಿದ್ಯಾ ಸಂಸ್ಥೆಗಳಿಗೆ ವೈಯಕ್ತಿಕವಾಗಿ 1 ಲಕ್ಷ ವಿದ್ಯಾನಿಧಿ ಸಮರ್ಪಿಸಿ ಶುಭಾಶಯದ ಮಾತುಗಳನ್ನಾಡಿದರು. ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು. ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಾಲೇಜಿನ ಪ್ರತಿಭಾನ್ವಿತ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕಿ ಕವಿತಾ ಕೆ., ಶಿಕ್ಷಕ ವೀರಪ್ಪ ಗೌಡ, ಮುಖ್ಯೋಪಾಧ್ಯಾಯಿನಿ ವಿದ್ಯಾ ಕೆ. ಬಹುಮಾನ ವಿಜೇತರನ್ನು ಪರಿಚಯಿಸಿದರು.
ಅತ್ಯುತ್ತಮ ಅಂಕ ಪಡೆದ ಎಸ್. ಎಸ್. ಎಲ್. ಸಿ. ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು, ಕ್ರೀಡಾ ಕ್ಷೇತ್ರದ ಸಾಧಕರನ್ನು ಹಾಗೂ
ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಗದೀಶ್ ರೈ ಅವರು ಸನ್ಮಾನಿತರನ್ನು ಪರಿಚಯಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಬಿ. ಅಬ್ದುಲ್ ಸಲಾಂ ಮಾತನಾಡಿ, ಯಶಸ್ವಿ ಹಿಂದೆ ಕಲಿಕೆ, ಕ್ರಿಯಾತ್ಮಕವಾದ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದಾಗಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಮಾತನಾಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ತುಂಬೆ ಕಾಲೇಜಿನ ಪ್ರಾಂಶುಪಾಲ ಕೆ. ಎನ್. ಗಂಗಾಧರ ಆಳ್ವ 2022ರ ಶೈಕ್ಷಣಿಕ ವರದಿ ವಾಚಿಸಿದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ ತಂಡೇಲ್, ಉಪಾಧ್ಯಕ್ಷ ನಿಸಾರ್ ಅಹ್ಮದ್ ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹಮದ್, ಗಣೇಶ್ ಸಾಲ್ಯಾನ್, ಮಾಜಿ ಸದಸ್ಯ ಪ್ರಕಾಶ್ ಬಿ ಶೆಟ್ಟಿ ಶ್ರೀಶೈಲ, ಪಿ. ಟಿ. ಎ. ಸದಸ್ಯರಾದ ಮ್ಯಾಕ್ಸಿಮ್ ಕುವೆಲ್ಲೋ, ಸುರೇಶ್, ಗಫೂರ್, ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆ, ಸಂಸ್ಥೆಗಳ ನಾಯಕ ನಾಯಕಿಯರು ಉಪಸ್ಥಿತರಿದ್ದ ಸಮಾರಂಭದಲ್ಲಿ ಮೊದಲಿಗೆ ವಿದ್ಯಾರ್ಥಿ ಮಹಮ್ಮದ್ ಶಾನ್ ಕಿರಾತ್ ಪಠಿಸಿದರು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು. ಮುಖ್ಯ ಶಿಕ್ಷಕ ಶ್ರೀನಿವಾಸ್ ಕೆದಿಲ ಸ್ವಾಗತಿಸಿ, ಉಪನ್ಯಾಸಕಿ ಶರ್ಮಿಳಾ ಕೆ. ವಂದಿಸಿದ್ದರು. ಉಪನ್ಯಾಸಕ ವಿ. ಎಸ್. ಭಟ್ ಹಾಗೂ ರಮೇಶ್ ಮೆಲ್ಕಾರ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.















