Coastal Bulletin

ಬಂಟ್ವಾಳ: ಬೆಳ್ತಂಗಡಿ ತಾಲೂಕು ಪುತ್ತಿಲ ಗ್ರಾಮದ ಯುವ ವಕೀಲ ಕುಲದೀಪ್ ಶೆಟ್ಟಿಯವರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಪುಂಜಾಲಕಟ್ಟೆ ಠಾಣಾಧಿಕಾರಿ ಮತ್ತು ಇತರ ಪೊಲೀಸರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಲೀಗಲ್ ಫೋರಂನ ನೇತೃತ್ವದಲ್ಲಿ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ಪೊಲೀಸ್ ಉಪವಿಭಾಗದ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಕಾರರನ್ನು ಉದ್ದೇಶಿಸಿ ಸಂಘಟನೆಯ ಜಿಲ್ಲಾಧ್ಯಕ್ಷ ಎಸ್.ಪಿ. ಚೆಂಗಪ್ಪ ಮಾತನಾಡಿ, ಪೊಲೀಸರು ಹಾಗೂ ವಕೀಲರ ಬಾಂಧವ್ಯ ಒಳ್ಳೆದಿದ್ದರೆ ಕಾನೂನು ಸುವ್ಯವಸ್ಥೆ ಉತ್ತಮವಾಗಿರುತ್ತದೆ. ಪೊಲೀಸರಿಗೂ ವಕೀಲರಿಗೂ ಸಂಘರ್ಷ ಬಂದರೆ ಸಮಾಜದ ಸ್ಥಿತಿ ಹೇಗಿರಬಹುದು? ಪೊಲೀಸರು ನಮ್ಮ ಹಕ್ಕನ್ನು ಮೊಟಕುಗೊಳಿಸುವುದು ಸರಿಯಲ್ಲ, ನಾವಿಬ್ಬರೂ ಕಾನೂನು ರಕ್ಷಕರು ಆದರೆ ಅಧಿಕಾರ ಮೀರಿ ವರ್ತಿಸಿರುವ ಪೊಲೀಸರ ಕ್ರಮ  ಖಂಡನೀಯ ಎಂದರು.

ಕುಲದೀಪ್ ಶೆಟ್ಟಿ ಹಾಗೂ ಅವರ ತಂದೆಯ ಮೇಲೆ ಕಳವು ಕೇಸು ಆಗಿರುವುದು ನಾಚಿಕೆಗೇಡಿನ ಪರಮಾವಧಿ. ಪೊಲೀಸರಿಗೆ ಕಾನೂನಿನ ಕನಿಷ್ಠ ಜ್ಞಾನ ಇರಬೇಕು,  ಪುಂಜಾಲಕಟ್ಟೆಯ ಎಸೈ ಹಗರಣದಲ್ಲಿ ಬಂದವರೇ? ವಕೀಲರಿಗೆ  ದೌರ್ಜನ್ಯ ಎಸಗಿದರೆ ನಾವೇಗೆ ಕಕ್ಷಿದಾರರ ಪರವಾಗಿ ವಾದಿಸುವುದು ಎಂದು ಪ್ರಶ್ನಿಸಿದ ಅವರು  ಪೊಲೀಸರು ಜನರನ್ನು ದಮನ ಮಾಡುವ

ರಾಕ್ಷಸರಾಗಬಾರದು ಎಂದರು. ತಕ್ಷಣ ತಪ್ಪಿತಸ್ಥ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು. ಬಳಿಕ  ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ  ಪ್ರತಾಪ್ ಸಿಂಗ್ ಥೋರಾಟ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಸಂಘಟನೆಯ ಉಪಾಧ್ಯಕ್ಷ ಉಮೇಶ್ ಕುಮಾರ್ ವೈ, ಪ್ರಧಾನ ಕಾರ್ಯದರ್ಶಿ ಉದನೇಶ್ವರ ಬಿ. ಸಂಘಟನಾ ಕಾರ್ಯದರ್ಶಿ ವೀರೇಂದ್ರ ಎಂ. ಸಿದ್ದಕಟ್ಟೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ವಿ.ಶೆಣೈ, ಶಿವ ಕುಮಾರ್, ಪ್ರಮೋದ್ ಕುಮಾರ್ ಹಾಗೂ ಎಲ್ಲಾ ತಾಲೂಕು ಸಂಘಟನೆಯ ಪ್ರಮುಖರು ಹಾಜರಿದ್ದರು.

ಮನವಿ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಥೋರಾಟ್ ಅವರು ಈ ಪ್ರಕರಣದ ತನಿಖೆಯನ್ನು ಬಂಟ್ವಾಳ ಉಪವಿಭಾಗ ವ್ಯಾಪ್ತಿಯ ಹೊರತು ಪಡಿಸಿ ಪ್ರತ್ಯೇಕ ಪೊಲೀಸ್ ಅಧಿಕಾರಿಯಿಂದ  ನಡೆಸಲಾಗುವುದು ಎಂದು ಭರವಸೆ ನೀಡಿದರು.

Leave a Comment