ಬಂಟ್ವಾಳ: ಇದೀಗ ಅಮೃತ ಕಾಲದಲ್ಲಿರುವ ಭಾರತ ದೇಶವು ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವಾಗಿದ್ದು ಶೀಘ್ರದಲ್ಲೇ ಜಾಗತಿಕವಾಗಿ ಪ್ರಬಲ ಆರ್ಥಿಕತೆಯ ಉತ್ತುಂಗದ ಸ್ಥಾನಕ್ಕೆ ಏರುವ ಹಾದಿಯಲ್ಲಿದೆ. ಐಟಿ ಉದ್ಯಮ, ರಫ್ತು ಚಟುವಟಿಕೆಗಳು ಈ ಹಂತಕ್ಕೆ ಬೆಳೆಯುವಲ್ಲಿ ಅಂದಿನ ಪ್ರಧಾನಿಗಳಾಗಿದ್ದ ಪಿ.ವಿ. ನರಸಿಂಹ ರಾವ್, ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಗಳೂ ಕಾರಣವಾಗಿದ್ದು ಇಂಜಿನಿಯರಿಂಗ್ ಪದವೀಧರರಿಗೆ ಹೊಸ ಉದ್ಯಮಕ್ಕೆ ವಿಪುಲ ಅವಕಾಶಗಳು ಸೃಷ್ಟಿಯಾಗಿವೆ. ಅವಕಾಶವನ್ನು ಬಾಚಿಕೊಂಡು ಸ್ಪರ್ಧಾತ್ಮಕ , ಚಿಂತನೆಗಳನ್ನು ಕಾರ್ಯರೂಪಕ್ಕಿಳಿಸಿದರೆ ಸಾಕಷ್ಟು ಹೂಡಿಕೆದಾರರು ಪ್ರೋತ್ಸಾಹಿಸುವ ನಿರೀಕ್ಷೆಯಲ್ಲಿದ್ದಾರೆ ಎಂದು ಹಾಂಗ್ಯೋ ಐಸ್ ಕ್ರೀಂ ನ ಆಡಳಿತ ನಿರ್ದೇಶಕ ಪ್ರದೀಪ್ ಜಿ.ಪೈ ಹೇಳಿದರು.
ಅವರು ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಮೂರು ದಿನಗಳ 'ಆಕೃತಿ' ತಾಂತ್ರಿಕ, ಸಾಂಸ್ಕೃತಿಕ ಉತ್ಸವ, ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಕೆನರಾ ಇಂಜಿನಿಯರಿಂಗ್ ಕಾಲೇಜಿನ ಆರಂಭಕ್ಕೆ ಶ್ರಮಿಸಿದ ಕೇಪುಳ್ ದಿನೇಶ್ ನಾಯಕ್, ಅಭಿವೃದ್ಧಿಗೆ ಪೂರಕವಾಗಿ ಸುಸಜ್ಜಿತ ಆಡಿಟೋರಿಯಂ ಕೊಡುಗೆ ನೀಡಿದ ಡಾ. ಪಿ. ದಯಾನಂದ ಪೈ ಅವರನ್ನು ಶ್ಲಾಘಿಸಿದ ಪ್ರದೀಪ್ ಪೈ ಬದ್ಧತೆ, ಏಕಾಗ್ರತೆಯ ಜತೆಗೆ ಸದುದ್ದೇಶಕ್ಕೆ ಯಾವತ್ತೂ ಯಶಸ್ಸು ದೊರೆಯುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಉಪಾಧ್ಯಕ್ಷ ಕೆ. ಸುರೇಶ್ ಕಾಮತ್ ಮಾತನಾಡಿ ಶಿಕ್ಷಣ ವ್ಯಕ್ತಿತ್ವ ರೂಪಿಸುವುದರ ಜತೆಗೆ ಸಮಾಜದ ಶುದ್ಧತೆಗೆ ಕಾರಣವಾಗುತ್ತದೆ. ನಮ್ಮ ಕುರಿತಾದ ನಂಬಿಕೆಯ ಜತೆಗೆ ದೇವರ ಮೇಲಿನ ವಿಶ್ವಾಸ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು.
ಕಾಲೇಜು ಸಂಚಾಲಕ, ಆಡಳಿತ ಮಂಡಳಿ ಕಾರ್ಯದರ್ಶಿ ಎಂ. ರಂಗನಾಥ ಭಟ್ ಮಾತನಾಡಿ ರಜತ ಸಂಭ್ರಮಕ್ಕೆ ಅಣಿಯಾಗುತ್ತಿರುವ ಕಾಲೇಜಿನಲ್ಲಿ ಸ್ಟಾರ್ಟಪ್, ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ
ಆದ್ಯತೆ ದೊರೆಯಲಿದೆ. ದಾನಿ ಬೆಳ್ವೆ ವಿನಾಯಕ ಕುಡ್ವಾ ಹೆಸರಿನಲ್ಲಿ ಒಂದು ಕೋಟಿ ರೂ ವೆಚ್ಚದ ಸಂಶೋಧನಾ ಕೇಂದ್ರ ತೆರೆಯಲಾಗುವುದು. ವಿದ್ಯಾರ್ಥಿಗಳು ಅವಕಾಶಗಳನ್ನು ಬಾಚಿಕೊಳ್ಳಲು ಸನ್ನದ್ಧರಾಗಿರಬೇಕು ಎಂದರು.
ಪ್ರಾಂಶುಪಾಲ ಡಾ. ನಾಗೇಶ್ ಹೆಚ್.ಆರ್. ವಾರ್ಷಿಕ ವರದಿ ವಾಚಿಸಿದರು. ಉಪ ಪ್ರಾಂಶುಪಾಲ ಡಾ.ಡೇಮಿಯನ್ ಎ. ಡಿಮೆಲ್ಲೋ, ಆಡಳಿತ ಮಂಡಳಿ ಸದಸ್ಯ ಬಸ್ತಿ ಪುರುಷೋತ್ತಮ ಶೆಣೈ, ಅಶ್ವಿನಿ ಕಾಮತ್, ಗಿರಿಧರ ಕಾಮತ್, ಆಡಳಿತ ಕೌನ್ಸಿಲ್ ಸದಸ್ಯ ವಿನಾಯಕ್ ಕಾಮತ್, ಆಕೃತಿ ಉತ್ಸವದ ಪ್ರಧಾನ ಸಮನ್ವಯಕಾರ ನವೀನ್ ಎ.ಕಲಾಲ್, ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷ ಪ್ರಥಮ್ ಕಾಮತ್, ಆಕೃತಿ ಕೋರ್ ಕಮಿಟಿ ವಿದ್ಯಾರ್ಥಿಗಳಾದ ಅಂಕಿತ್ ಶೆಣೈ, ಸಂಜಯ್ ಕಾಮತ್, ಅನೂಪ್ ಪ್ರಭು, ಶ್ರೀರಾಮ್ ಶೆಣೈ, ಆದಿತ್ಯ ಭಕ್ತ, ಪ್ರಜ್ಞಾ ನಾಯಕ್, ವಚನ್ ಕುಡ್ವ ಉಪಸ್ಥಿತರಿದ್ದರು.
ಸಹ ಪ್ರಾಧ್ಯಾಪಕಿ ಕ್ಯಾರೆಲ್ ಡಿ.ಮೆಲ್ಲೋ ಅತಿಥಿಯನ್ನು ಪರಿಚಯಿಸಿ ಸ್ವಾಗತಿಸಿದರು. ಪ್ರತಿಭಾನ್ವಿತರು, ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮಣೇಲ್ ಓಂ ನಾಯಕ್, ಹಿಮಾಂಶು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪರಿಚಯಿಸಿದರು.














