ಫೋನ್ ಕರೆ ಮೂಲಕ ಹೆಸರಾಂತ ಕಂಪನಿಯ ಡೀಲರ್ ಶಿಪ್ ಆಮಿಷ ಬಂಟ್ವಾಳದ ಪದವೀಧರ ವ್ಯಕ್ತಿಗೆ ಬರೋಬ್ಬರಿ 17.60 ಲಕ್ಷರೂ. ಧೋಕಾ

Coastal Bulletin
ಫೋನ್ ಕರೆ ಮೂಲಕ ಹೆಸರಾಂತ ಕಂಪನಿಯ ಡೀಲರ್ ಶಿಪ್ ಆಮಿಷ ಬಂಟ್ವಾಳದ ಪದವೀಧರ ವ್ಯಕ್ತಿಗೆ ಬರೋಬ್ಬರಿ 17.60 ಲಕ್ಷರೂ. ಧೋಕಾ

ಬಂಟ್ವಾಳ, ಆ. 24: ಬಂಟ್ವಾಳದ ವ್ಯಕ್ತಿಯೊಬ್ಬರಿಗೆ ಇಪ್ಕೋ ಕಂಪನಿಯ ಡೀಲರ್ ಶಿಪ್ ನೀಡುವುದಾಗಿ ಫೋನ್ ಕರೆ ಮೂಲಕ ನಂಬಿಸಿ ವಿವಿಧ ಶುಲ್ಕಗಳನ್ನುಹಂತ ಹಂತವಾಗಿ ಕಟ್ಟಿಸಿ ಬಳಿಕ ಬರೋಬ್ಬರಿ 17.60 ಲಕ್ಷ ರೂ. ವಂಚಿಸಿ ಘಟನೆಯ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳದ ಇಂಜಿನಿಯರಿಂಗ್ ಪದವೀಧರ ವಿಕ್ರಮ್ ಅವರು ಪದವಿ ಮುಗಿಸಿ ಮನೆಯಲ್ಲೇ ಇದ್ದರು. ಕಳೆದ ಜುಲೈ 4ರಂದು ಅವರ ಮೊಬೈಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಹೆಸರಾಂತ ಇಪ್ಕೋ ಕಂಪೆನಿಯ ರಿಲೇಶನ್‌ಶಿಪ್ ಮ್ಯಾನೇಜ‌ರ್ ನಿಲೇಶ್ ಮಿಶ್ರಾ ಎಂದು ಪರಿಚಯಿಸಿಕೊಂಡು, ಕಂಪೆನಿಯ ಡೀಲರ್ ಶಿಪ್ ನೀಡುವುದಾಗಿ ಹೇಳಿದನು. ವಿಕ್ರಮ್ ಅದಕ್ಕೆ ಒಪ್ಪಿಗೆ

ಸೂಚಿಸಿದ್ದರು. ಬಳಿಕ ಸಂಬಂಧಪಟ್ಟ ಅರ್ಜಿಗಳನ್ನು ವಿಕ್ರಮ್ ಅವರ ಇ-ಮೇಲ್‌ಗೆ ಕಳುಹಿಸಿದನು. ಅದನ್ನು ಭರ್ತಿ ಮಾಡಿ ಆತ ತಿಳಿಸಿದಂತೆ ಪಾನ್ ಕಾರ್ಡ್, ಬ್ಯಾಂಕ್ ವಿವರ ಹಾಗೂ ವೈಯಕ್ತಿಕ ದಾಖಲೆಗಳನ್ನು ನೀಡಿದ್ದರು.

ಬಳಿಕ ನೋಂದಣಿ ಶುಲ್ಕವಾಗಿ 35 ಸಾವಿರ ರೂ. ಕಳುಹಿಸಿದ್ದರು. ಮುಂದೆ ವಿವಿಧ ಶುಲ್ಕವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 17,60,810 ರೂ. ಕಳುಹಿಸಿದ್ದರು. ತಮ್ಮ ಕಂಪೆನಿಯ ಉತ್ಪನ್ನಗಳ ಸಾಗಾಟ ಸಮಯದಲ್ಲಿ ಏನಾದರೂ ಸಮಸ್ಯೆಯಾದರೆ ಕರೆ ಮಾಡಿ ಎಂದು ಹೇಳಿ ವಾಹನ ಚಾಲಕರ ಮೊಬೈಲ್ ಸಂಖ್ಯೆಯನ್ನೂ ನೀಡಿದ್ದರು. ಆ. 8ರಂದು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ನಾವು ಬೆಂಗಳೂರಿಗೆ ಬಂದಿದ್ದು, 10ರಂದು

ಮಡಂತ್ಯಾರಿನಲ್ಲಿರುವ ವಿಕ್ರಮ್ ಅವರ ಗೋದಾಮಿಗೆ ಬರುತ್ತೇವೆ ಎಂದು ಹೇಳಿ ಬರದೆ ವಂಚಿಸಿದ್ದರು.

ಆ. 11ರಂದು ವಿಕ್ರಮ್ ಅವರು ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಎಲ್ಲವೂ ಸ್ವಿಚ್ ಆಫ್ ಆಗಿತ್ತು. ಅವರು ಕೊಟ್ಟಿರುವ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದಾಗ ನಿಮ್ಮ ಉತ್ಪನ್ನ ಬರುತ್ತಿದ್ದು, ನೆಟ್‌ವರ್ಕ್ ಸಮಸ್ಯೆಯಿಂದ ಕರೆ ಸಿಗದೇ ಇರಬಹುದು ನಾವು ಅವರಿಗೆ ತಿಳಿಸುತ್ತೇವೆ ಎಂದು ಹೇಳಿ ನಂತರ ಕರೆ ಮಾಡಿದಾಗ ಸ್ವಿಟ್ಸ್ ಆಫ್ ಎಂಬ ಸಂದೇಶ ಬರುತ್ತಿದೆ. ಈ ಕುರಿತು ಸಂಶಯಗೊಂಡು ಬೇರೆಯವರಲ್ಲಿ ವಿಚಾರಿಸಿದಾಗ ಇದೊಂದು ರೀತಿಯ ವಂಚನೆ, ಮೋಸ ಜಾಲ ಎಂದು ತಿಳಿದುಬಂದಿದೆ ಎಂದು ಅವರು ಸೆನ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಸಿ ಇ ಎನ್‌ ಅಪರಾಧ ಪೊಲೀಸ್‌ ಠಾಣೆ ಅ.ಕ್ರ: 60/2025, ಕಲಂ: 66(C), 66 ( D) IT ACT & 318(4 ), 319(2) BNS Act.ಯಂತೆ ಪ್ರಕರಣ ದಾಖಲಾಗಿರುತ್ತದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment