ಮಂಗಳೂರು : 'ಪತ್ರಿಕಾ ಮಾಧ್ಯಮ ಸಾಮಾಜಿಕ ಸ್ಥಿತಿಗತಿಗಳ ಪ್ರಾಮಾಣಿಕ ಅಭಿವ್ಯಕ್ತಿ. ಜನಜೀವನದ ನೈತಿಕ ಮಟ್ಟವನ್ನು ಕಾಯ್ದಿರಿಸಲು ಪತ್ರಿಕೆಗಳು ಮುಖ್ಯ. ಆದ್ದರಿಂದ ಹೆಚ್ಚೆಚ್ಚು ವಿದ್ಯಾರ್ಥಿಗಳು ಈ ಪತ್ರಿಕೋದ್ಯಮದತ್ತ ಬರುವಂತಾಗಬೇಕು. ಸೃಜನಶೀಲ ವಿದ್ಯಾರ್ಥಿಗಳ ಅವಶ್ಯಕತೆ ಪತ್ರಿಕಾರಂಗಕ್ಕೆ ಇಂದಿಗೂ ಇದ್ದೇ ಇದೆ ' ಎಂದು ಉದಯವಾಣಿ ಪತ್ರಿಕೆಯ ನ್ಯೂಸ್ ಬ್ಯೂರೋ, ಹಿರಿಯ ಪತ್ರಕರ್ತ ಶ್ರೀ ಮನೋಹರ ಪ್ರಸಾದ್ ಅವರು ಅಭಿಪ್ರಾಯಪಟ್ಟರು.
ನಗರದ ಪ್ರತಿಷ್ಠಿತ ಸ್ವಾಯತ್ತ ಶಿಕ್ಷಣ ಸಂಸ್ಥೆಯಾಗಿರುವ ಸಂತ ಆಗ್ನೆಸ್ ಕಾಲೇಜಿನ ಕನ್ನಡ ಸಂಘ 'ಆಕಾರ' ವತಿಯಿಂದ ನಡೆದ 'ಸ್ಫೂರ್ತಿ' - ಸಾಧಕರ ಜೊತೆಗೊಂದು ಮುಕ್ತ ಮಾತುಕತೆ ಕಾರ್ಯಕ್ರಮದಲ್ಲಿ ಅವರು ತಿಂಗಳ ಅತಿಥಿಯಾಗಿ ಮಾತನಾಡಿದರು.
ಕರಾವಳಿಯ ಪತ್ರಿಕೋದ್ಯಮ ಹಲವು ಸವಾಲುಗಳ ಮಧ್ಯೆಯೇ ಬೆಳೆದು ಬಂದಿದೆ. ಕಾಲೇಜಿನ ದಿನಗಳಲ್ಲೇ ನನಗೆ ವರದಿಗಾರ ಎಂಬ ಹೆಸರಿತ್ತು. ಕುಳಿತುಕೊಳ್ಳಲು ಪ್ರತ್ಯೇಕ ಸ್ಥಾನವೂ ಇತ್ತು. ಕಾಲೇಜು ದಿನಗಳೇ ನನ್ನ ನಂತರದ ಬಹುಮುಖಿ ಆಸಕ್ತಿಗಳಿಗೆ ಮುಖ್ಯ ಪ್ರೇರಣೆ. ಹಾಗಾಗಿ ವಿದ್ಯಾರ್ಥಿಗಳು ಕಾಲೇಜು ವ್ಯಾಸಂಗದ ಸಂದರ್ಭವನ್ನು ಅಧ್ಯಯನಶೀಲತೆ ಮತ್ತು ನಿರಂತರ ಸಾಧನೆಗಳ ಮೂಲಕ ಗಟ್ಟಿಗೊಳಿಸಬೇಕು
ಎಂದು ಅವರು ಹೇಳಿದರು.
ವಿವಿಧ ರಂಗಗಳ ಸಾಧಕರ ಪರಿಚಯ ಮತ್ತು ಅವರ ಜೊತೆಗೆ ವಿದ್ಯಾರ್ಥಿನಿಯರು ಸಂವಾದ ನಡೆಸಿ ಪ್ರೇರಣೆ ಪಡೆದುಕೊಳ್ಳಬಹುದು ಎಂಬ ಉದ್ದೇಶವನ್ನು ಇಟ್ಟುಕೊಂಡು ಈ ಸ್ಫೂರ್ತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಕಾರ ಕನ್ನಡ ಸಂಘದ ಅಧ್ಯಕ್ಷರಾದ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಅರುಣ್ ಉಳ್ಳಾಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಂಘದ ಸದಸ್ಯೆ ಜೋಷ್ಣಿ ಸ್ವಾಗತಿಸಿದರು. ಪ್ರಾಪ್ತಿ ವಂದನಾರ್ಪಣೆ ಮಾಡಿದರು. ತಾನ್ಯ ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು. ಬಹು ಸಂಖ್ಯೆಯ ವಿದ್ಯಾರ್ಥಿನಿಯರು ಭಾಗವಹಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಾಧಕ ಅತಿಥಿ ಜೊತೆಗೆ ವಿದ್ಯಾರ್ಥಿನಿಯರ ಮುಕ್ತ ಸಂವಾದ ಕಾರ್ಯಕ್ರಮ ನಡೆಯಿತು.














