ಬಂಟ್ವಾಳ: ಇಲ್ಲಿನ ತಾಲೂಕು ಆಡಳಿತದಲ್ಲಿ ಗ್ರೇಡ್ -2 ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕವಿತಾ .ಎಸ್ ಅವರು ಬೆಂಗಳೂರು ಯಲಹಂಕಕ್ಕೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ತಾಲೂಕಾಡಳಿತದಿಂದ ಬುಧವಾರ ಗೌರವಿಸಿ ಬೀಳ್ಕೊಡಲಾಯಿತು.
.ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ನಡೆದ ಈ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ರಶ್ಮಿ.ಎಸ್.ಆರ್ ಅವರು ಮಾತನಾಡಿ, ತಮ್ಮ ಸೌಮ್ಯ ನಡೆ ನುಡಿಗಳಿಂದ ತಾಲೂಕು ಆಡಳಿತವನ್ನು ಚೆನ್ನಾಗಿ ನಿಭಾಯಿಸುವಲ್ಲಿ ಸಹಕರಿಸಿದ ಗ್ರೇಡ್ 2 ತಹಶೀಲ್ದಾರ್ ಕವಿತಾ.ಎಸ್ ರವರಿಗೆ ಕೃತಜ್ಞತೆ ಸಲ್ಲಿಸಿದರಲ್ಲದೆ ಅವರ ಕರ್ತವ್ಯ ದಕ್ಷತೆಗೆ ಶ್ರೇಯಸ್ಸು ಲಭಿಸಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗ್ರೇಡ್ 2 ತಹಶೀಲ್ದಾರ್ ಕವಿತಾ ಅವರು ಬಂಟ್ವಾಳ ತಾಲೂಕಿನಲ್ಲಿ ನೌಕರ ಸ್ನೇಹಿ ವಾತಾವರಣ ಇದ್ದು
ಎಲ್ಲರ ಸಹಕಾರದಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು ಎಂದು ಹೇಳಿದರು.
ಸಹೋದ್ಯೋಗಿಗಳು, ಉಪತಹಸೀಲ್ದಾರ್ ರವರು, ಗ್ರಾಮ ಲೆಕ್ಕಾಧಿಕಾರಿಗಳು, ಕಚೇರಿ ಸಿಬ್ಬಂದಿಗಳು ಗ್ರಾಮ ಸಹಾಯಕರು, ಗ್ರೇಡ್ 2 ತಹಶೀಲ್ದಾರ್ ರವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸ್ಥಾನಿಯ ಶಿರಸ್ತೇದಾರ್ ನರೇಂದ್ರನಾಥ್ ಮಿತ್ತೂರು, ಉಪತಹಸೀಲ್ದಾರ್ ರಾಜೇಶ್ ನಾಯ್ಕ್, ದಿವಾಕರ ಮುಗುಳಿಯ, ಕಂದಾಯ ನಿರೀಕ್ಷಕರಾದ ವಿಜಯ್ ಆರ್, ಸಂತೋಷ್, ಪ್ರಶಾಂತ್ ಶೆಟ್ಟಿ,ತಾಲೂಕು ಕಚೇರಿ ಸಿಬ್ಬಂದಿಗಳು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಸಹಾಯಕರು ಉಪಸ್ಥಿತರಿದ್ದರು.
ಉಪತಹಸೀಲ್ದಾರ್ ನವೀನ್ ಬೆಂಜನಪದವು ಸ್ವಾಗತಿಸಿ, ಗ್ರಾಮ ಲೆಕ್ಕಾಧಿಕಾರಿ ಅನಿಲ್ ವಂದಿಸಿದರು.














