ಹುಲಿ, ದನ ಒಟ್ಟಿಗೆ ಕೂತಿದೆ , ಆಳೆತ್ತರದ ಜಿರಾಫೆ ಯಾವುದೇ ಭಯವಿಲ್ಲದೆ ನಿಂತಿದೆ,ನಾರಾಯಣ ಗುರುಗಳು ಧ್ಯಾನಸಕ್ತರಾಗಿದ್ದಾರೆ, ಗಾಂಧೀಜಿ ಮಂದಹಾಸ ಬೀರುತ್ತಾ ಕೂತಿದ್ದಾರೆ ಇನ್ನೂ ಹಲವು ಪ್ರಾಣಿ ಪಕ್ಷಿಗಳು ನಮ್ಮನ್ನು ಒಳ ಹೊಕ್ಕಾಗ ಸ್ವಾಗತಿಸುತ್ತಿದೆ.
ಅರೇ..ನಾನು ಯಾವ ಉದ್ಯಾವನಕ್ಕೆ ಬಂದೆ ಎಂದು ಆಲೋಚಿಸುವ ಹೊತ್ತಿಗೆ ಸೌಮ್ಯ ಸ್ವಭಾವದ ಕಲಾ ಸಾಧಕ ಮನೋಜ್ ಕನಪಾಡಿ ನನ್ನನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ. ಹೌದು ಇದು ಕುಕ್ಕೆಶ್ರೀ ಡಿಸೈನರ್ ಅಂಡ್ ಫೈಬರ್ ಕ್ರಾಫ್ಟ್ ಕುಟೀರಕ್ಕೆ ಭೇಟಿ ಕೊಟ್ಟಾಗ ಕಂಡು ಬಂದ ದೃಶ್ಯ.
ಪ್ರತಿಭೆ ಅನಾವರಣಗೊಳಿಸಲು ಕೆಲವರು ಅವಕಾಶಕ್ಕಾಗಿ ಕಾಯುತ್ತಾರೆ, ಇನ್ನು ಕೆಲವರು ತಾವೇ ಅವಕಾಶವನ್ನು ಸೃಷ್ಟಿಸುತ್ತಾರೆ. ತನ್ನ ಅದಮ್ಯ ಆಸಕ್ತಿ,ಪ್ರಾಮಾಣಿಕ ಪರಿಶ್ರಮ,ಏಕಾಗ್ರತೆ,ಶ್ರದ್ದೆಯಿಂದ ಇಂದು ಮಣ್ಣಿನ ಹಾಗೂ ಫೈಬರ್ ಕಲಾಕೃತಿಗಳಿಂದ ಹೆಸರು ಮಾಡುತ್ತಿರುವ ಪ್ರತಿಭಾವಂತ ಕಲಾಕಾರ, ಮನೋಜ್ಞ ಕೈಚಳಕದ ಮನೋಜ್ ಕನಪಾಡಿಯವರು ಕಲಾ ನೈಪುಣ್ಯತೆಗೆ ಸಾಕ್ಷಿ.
ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೊಟ್ಲು ಸಮೀಪದ ಕನಪಾಡಿಯಲ್ಲಿ ಮನೋಜ್ ರ ಜನನ, ಬಡತನದ ಜೀವನ, ಬಾಲ್ಯದಲ್ಲೇ ಚಿತ್ರಕಲೆಯ ಕುತೂಹಲ,ಆಸಕ್ತಿ ತುಡಿತ. ಕುಟುಂಬದವರು ಈ ಕಲೆಯ ಬೆನ್ನು ಬಿದ್ದವರಲ್ಲ, ಪ್ರಾರ್ಥಮಿಕ ಹಂತದಲ್ಲಿ ಶಿಕ್ಷಕರ ಮಾರ್ಗದರ್ಶನ, ಹಲವು ಚಿತ್ರ ಸ್ಪರ್ಧೆಗಳಲ್ಲಿ ಪ್ರಶಸ್ತಿ,ಈ ಆಸಕ್ತಿಯು, ಬಿದಿರು,ರಟ್ಟು,ತಾಳೆಗರಿಗಳೊಂದಿಗೆ ಪ್ರಯೋಗ, ಹೊಸ ಕಲಾ ಪ್ರಕಾರಗಳ ಸೃಷ್ಟಿ.
ಮುಂದೆ ಮಹಾಲಸಾ ಚಿತ್ರ ಶಾಲೆಯಲ್ಲಿ ಡಿಪ್ಲೋಮಾ ಪದವಿ ಪಡೆದು ವೃತ್ತಿ ಬದುಕಿಗೆ ಚಿತ್ರ ಕಲೆಯನ್ನೇ ನೆಚ್ಚಿದ ಸಂದರ್ಭ. ಕಲಿತ ವಿದ್ಯೆ ಹಾಗೂ ತನ್ನ ತುಡಿತದ ಫಲವಾಗಿ ಜಲವರ್ಣ ಹಾಗೂ ಮೈಸೂರ್ ಸಂಪ್ರದಾಯಿಕ ಚಿತ್ರ ಕಲೆಯಲ್ಲಿ ಅದ್ವಿತೀಯ ಸಾಧನೆ,ಸ್ಪ್ರೇ ಪೇಂಟಿಂಗ್ ನಲ್ಲೂ ಅನುಭವ.
ತನಗೆ ತಿಳಿದಿರುವ ಚಿತ್ರಕಲಾ ಅನುಭವ ಹಾಗೂ ಅನುಭಾವವನ್ನು ಶಾಲಾ ಗುರುವಾಗಿ, ಶಿಬಿರಗಳಲ್ಲಿ ಸಂಪನ್ಮೂಲಗ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ,ಕಲಿಯುವ ಆಸಕ್ತಿ ಇರುವ ಇತರರಿಗೆ
ಧಾರೆ ಎರೆಯುವ ಸಹೃದಯಿ.
ಸೂಜಿಗಲ್ಲಿನಂತೆ ಜನರನ್ನು ಆಕರ್ಷಸುವ ಇವರ ಮಣ್ಣಿನ ಕಲಾ ಕೃತಿಗಳು ಎಲ್ಲೆಡೆಯು ಜನಮನ ಗಲಿಸುವ ಸಮಯ. ಮುಂದೆ ಅಧಿಕ ಬಾಳಿಕೆ ಬರುವ ಫೈಬರ್ ಕಲಾಕೃತಿಗಳತ್ತ ಒಲವು, ಒಮ್ಮೆ ಮನಸ್ಸಿನಲ್ಲಿ ಗ್ರಹಿಸಿದರೆ ಅದೇ ಪಡಿಯಚ್ಚು ಕಲಾಕೃತಿಯಾಗಿ ಮೂಡಿಸುವ ಜಾಣ್ಮೆ, ಜನರ ಬೇಡಿಕೆಗೆ ತಕ್ಕಂತೆ ಸೃಷ್ಟಿಸುವ ಚಾಕಚಕ್ಯತೆ ಮನೋಜ್ ರಿಗೆ ಕರಗತ.
ಮುಖವಾಡ ತಯಾರಿ, ಟ್ಯಾಬ್ಲೋ ಕಲಾಕೃತಿ,ಉದ್ಯಾನವನ, ಅಲಂಕಾರಿಕ ವಸ್ತು, ಆಕರ್ಷಕ ವೇದಿಕೆ ನಿರ್ಮಾಣ, ಕಾರಂಜಿ ಫೈಬರ್ ಬಿದಿರು ಬೇಲಿ ನಿರ್ಮಾಣದಲ್ಲೂ ಇವರದ್ದು ಎತ್ತಿದ ಕೈ, ಚಿಕ್ಕ ಹಕ್ಕಿಯಿಂದ ಹಿಡಿದು ಆಲೆತ್ತರದ ಜಿರಾಫೆಯವರೆಗೂ ಮನೋಜ್ಞ ಕಲಾಕೃತಿ ರಚಿಸುವ ಮನೋಜ್ ರವರು ಹಿಡಿದ ಕೆಲಸವನ್ನು ಬಹಳ ಖುಷಿ ಹಾಗೂ ಆಸಕ್ತಿಯಿಂದ ಮಾಡುವ ನಿಪುಣ.
ಒಟ್ಟಿನಲ್ಲಿ ಕಲಾ ಕ್ಷೇತ್ರದ ಪ್ರತಿಯೊಂದು ಪ್ರಕಾರಗಳನ್ನು ಬಲ್ಲವರಾಗಿರುವ ಇವರ ಕಲಾಕೃತಿಗಳಿಗೆ ಹೊರ ಜಿಲ್ಲೆಗಳಿಂದಲೂ ಬೇಡಿಕೆ ಇರುವುದು ಇವರ ಕಲಾ ಪ್ರೌಡಿಮೆಗೆ ಸಾಕ್ಷಿ, ಕಲಾ ವೃತ್ತಿಯಿಂದ ಜೀವನ ನಿರ್ವಹಣೆಯೊಂದಿಗೆ ಸಮಾಜದಲ್ಲಿ ಗೌರವಯುತ ಬದುಕು ಸಾಧ್ಯ ಎನ್ನುದನ್ನು ತೋರಿಸಿದ ಕಲಾ ಚತುರ.
ಸಹೋದರ ಲೋಹಿತ್ ರ ಸಹಕಾರ, ಪತ್ನಿ ಸೌಮ್ಯರ ನಿರಂತರ ಪ್ರೋತ್ಸಾಹ ಇವರ ಕಲಾ ಸಾಧನೆಗೆ ಅಡಿಪಾಯ. ತನ್ನ ಮಗ ಹೃತ್ವಿಕ್ ಗೂ ಕಲಾ ಶಿಕ್ಷಣ ಕೊಡಬೇಕೆಂನ್ನುವ ಇವರ ಕನಸು. ಹಲವಾರು ಸಂಘ ಸಂಸ್ಥೆಗಳಿಂದ ಗೌರವ ಸಮ್ಮಾನ ಪಡೆದ ಇವರು ಸಮಾಜದ ಆಸ್ತಿ.
ನಿಮ್ಮ ಕಲಾ ಸೇವೆ ನಿರಂತರ ಸಮಾಜಕ್ಕೆ ಲಭಿಸಲಿ ಮುಂದಿನ ಭವಿಷ್ಯ ಉಜ್ವಲವಾಗಲಿ ಎನ್ನುವುದೇ ಕೋಸ್ಟಲ್ ಬುಲೆಟಿನ್ ನ ಈ ಸಂದರ್ಭದ ಹಾರೈಕೆ














