ಬಂಟ್ವಾಳ: ಬೈಕ್ ಸ್ಕಿಡ್ ಆಗಿ ಡಾಮರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಹೋಟೆಲ್ ಕಾರ್ಮಿಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಬಿಸಿರೋಡಿನಲ್ಲಿ ನಡೆದಿದೆ.
ಬಾಳ್ತಿಲ ಗ್ರಾಮದ ಚೆಂಡೆ ನೀರಪಾದೆ ನಿವಾಸಿ ಯಶವಂತ ಯಾನೆ ಚೇತನ್ ( 35) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.ಚೇತನ್ ಅವರು ಮನೆಯಿಂದ ಬಿಸಿರೋಡಿಗೆ ಬರುವ ವೇಳೆ ಸಣ್ಣಕುಕ್ಕು ಎಂಬಲ್ಲಿ ಅಪಘಾತ ಸಂಭವಿಸಿದೆ.
ಚೇತನ್ ಅವರು ಬಿಸಿರೋಡಿನ ಸೋಮಯಾಜಿ ಹೌಸ್ ನಲ್ಲಿರುವ ಹೋಟೆಲ್ ಕೃಷ್ಣ ವಿಲಾಸದಲ್ಲಿ ಸಪ್ಲಾಯರ್ ಕೆಲಸ ಮಾಡುತ್ತಿದ್ದ. ಅಯ್ಯಪ್ಪ ಮಾಲಾಧಾರಿಯಾಗಿ ಶಬರಿಮಲೆ ಯಾತ್ರೆಗೆ ಹೋಗಿ ನ.19 ರಂದು ಮನೆಗೆ ಬಂದಿದ್ದರು.
ಹಾಗಾಗಿ ರಜೆಯಲ್ಲಿದ್ದ ಇವರು ಸಂಬಂಧಿಕರ ಮನೆಗೆ ಹೋಗಿ ಶಬರಿಮಲೆ ದೇವಸ್ಥಾನದಿಂದ ತಂದ ಪ್ರಸಾದ ವಿತರಿಸಿ,ಬಳಿಕ ಮನೆಗೆ ಪದಾರ್ಥಕ್ಕೆ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿದ್ದರು.
ಸಂಜೆ ಸುಮಾರು 8 ಗಂಟೆ
ವೇಳೆ ಸ್ನೇಹಿತರು ಅವರನ್ನು ಪೋನ್ ಮಾಡಿ ಪೇಟೆಗೆ ಬರುವಂತೆ ಕರೆದಿದ್ದರು. ಹಾಗಾಗಿ ಅವರು ಬೈಕಿನಲ್ಲಿ ಹೊರಟು ಬರುವ ಸಂದರ್ಭದಲ್ಲಿ ಸಣ್ಣಕುಕ್ಕು ಎಂಬಲ್ಲಿ ಸ್ಕಿಡ್ ಆಗಿ ಬಿದ್ದು ತಲೆ ಗಂಭೀರವಾಗಿ ಗಾಯವಾಗಿತ್ತು. ಇವರನ್ನು ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮಧ್ಯಾಹ್ನ 1 ಗಂಟೆ ವೇಳೆಗೆ ಕೊನೆಯುಸಿರೆಳೆದಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ವಿವೇಕಾನಂದ ಫ್ರೆಂಡ್ಸ್ ಕ್ಲಬ್ ನ ಸಕ್ರೀಯ ಸದಸ್ಯನಾಗಿದ್ದ ಈತ ಸದಾ ಹಸನ್ಮುಖಿಯಾಗಿದ್ದ. ಪತ್ಮಿ, ಮಗಳು ಹಾಗೂ ಅಪಾರ ಅಭಿಮಾನಿಗಳನ್ನು ಇವರು ಅಗಲಿದ್ದಾರೆ.
ಬಂಟ್ವಾಳ ಟ್ರಾಫಿಕ್ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.















