ಮಂಗಳೂರು ವಿಶ್ವವಿದ್ಯಾನಿಲಯದ 40ನೇ ವಾರ್ಷಿಕ ಘಟಿಕೋತ್ಸವ ಎ. 23ರಂದು ಬೆಳಗ್ಗೆ 11 ಗಂಟೆಗೆ ವಿ.ವಿ. ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯ ತಿಳಿಸಿದ್ದಾರೆ.
ಸುಪ್ರಿಂಕೋರ್ಟ್ ನ್ಯಾಯಾಧೀಶ ನ್ಯಾ| ಎಸ್. ಅಬ್ದುಲ್ ನಝೀರ್ ಮುಖ್ಯ ಅತಿಥಿಯಾಗಿ ಫಟಿಕೋತ್ಸವ ಭಾಷಣ ಮಾಡಲಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಪದವಿ ಪ್ರದಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಉಪಸ್ಥಿತಿಯಲ್ಲಿ ಘಟಿಕೋತ್ಸವ ನಡೆಯಲಿದೆ. ಮಂಗಳೂರು ವಿ.ವಿ.ಯ ಘಟಿಕೋತ್ಸವದಲ್ಲಿ ಇದೇ ಮೊದಲ ಬಾರಿಗೆ ಅಧ್ಯಕ್ಷೀಯ ಭಾಷಣ ಇರಲಿದೆ ಎಂದು ಮಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ಈ ಬಾರಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುವುದು. ಶಿಕ್ಷಣ ಮತ್ತು ಸಮಾಜ ಸೇವೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಸಮಾಜ ಸೇವೆ ಮತ್ತು ಸಾಹಿತ್ಯದ ಸಾಧನೆಗಾಗಿ ಹರಿಕೃಷ್ಣ ಪುನರೂರು ಮತ್ತು ತುಳು ನಾಟಕ-ಸಿನೆಮಾ ಕ್ಷೇತ್ರದ ಸಾಧನೆಗಾಗಿ ದೇವದಾಸ್ ಕಾಪಿಕಾಡ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು.
ದೇವದಾಸ್ ಕಾಪಿಕಾಡ್ ಆಲ್‌ರೌಂಡರ್ ಕಲಾವಿದರಾಗಿದ್ದಾರೆ. ತುಳು ರಂಗಭೂಮಿ, ತುಳು ಚಿತ್ರರಂಗದಲ್ಲಿ ಅತೀ ಪ್ರಸಿದ್ಧಿ ಗಳಿಸಿದ ನಟರಾಗಿದ್ದಾರೆ. ಇದಷ್ಟೇ ಅಲ್ಲದೇ ಬರಹಗಾರ, ನಿರ್ದೇಶಕ, ಕಥೆಗಾರ, ಗೀತ ರಚನೆಕಾರ, ಗಾಯಕ, ನಿರ್ಮಾಪಕ, ಹಾಸ್ಯನಟನಾಗಿಯೂ ದೇವದಾಸ್ ಕಾಪಿಕಾಡ್ ತಮ್ಮ ಪ್ರತಿಭಾ ಪ್ರದರ್ಶನ ಮಾಡಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತುಳು ರಂಗಭೂಮಿ ಮತ್ತು ಚಲನಚಿತ್ರೋದ್ಯಮಕ್ಕೆ ನೀಡಿದ ಉತ್ತಮ ಕೊಡುಗೆಗಳನ್ನು
ಗುರುತಿಸಿ "ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ" ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಸಂದಿದೆ.
ಧರ್ಮಸ್ಥಳದ ಶ್ರೀಮತಿ ಹೇಮಾವತಿ.ವಿ.ಹೆಗ್ಗಡೆಯವರು ಕರ್ನಾಟಕದ ಲಕ್ಷಾಂತರ ಗ್ರಾಮೀಣ ಮಹಿಳೆಯರ ಪಾಲಿಗೆ ಸ್ಫೂರ್ತಿಯ ಮೂಲ. ಅವರ ದೂರದೃಷ್ಟಿ, ಆಲೋಚನೆಗಳು ಮತ್ತು ವಿವಿಧ ಮಹಿಳಾ ಸಬಲೀಕರಣ ಚಟುವಟಿಕೆಗಳ ಪ್ರಾರಂಭವು ರಾಜ್ಯದ ಗ್ರಾಮೀಣ ಮಹಿಳೆಯರ ಜೀವನದಲ್ಲಿ ಮಹತ್ತರವಾದ ಪರಿವರ್ತನೆಯನ್ನು ಮಾಡಿದಲ್ಲದೇ ಹಲವು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಿಗಾಗಿ ಧರ್ಮದರ್ಶಿ ಎಂಬ ಬಿರುದನ್ನು ಪಡೆದಿರುವ ವ್ಯಕ್ತಿ ದಕ್ಷಿಣ ಕನ್ನಡದ ಹರಿಕೃಷ್ಣ ಪುನರೂರುಬಡಕೂಲಿಕಾರ ಮಕ್ಕಳಿಗೆ ಶಾಲೆ ನಿರ್ಮಿಸಿಕೊಟ್ಟಿದ್ದಾರೆ. ಮೂಲ್ಕಿ ಶಿಕ್ಷಣ ಸಂಸ್ಥೆ, ಶಾರದಾ ಶಿಕ್ಷಣ ಸಂಸ್ಥೆ, ನೇತ್ರ ಚಿಕಿತ್ಸಾ ಕೇಂದ್ರ, ನೃತ್ಯಕಲಾ ಸಂಸ್ಥೆ ಮೊದಲಾದ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಬ್ಯಾಂಕ್ ಮತ್ತು ಉದ್ಯಮ ಸಂಸ್ಥೆ, ಪರಿರಕ್ಷಣ ಸಂಘ, ಅರಣ್ಯ ಪೋಷಣೆ ಸಂಸ್ಥೆ, ಭಾರತ ಸೇವಾದಳ, ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನ, ಯಕ್ಷಭಾರತ ಮತ್ತು ಸಹಕಾರ ಸಂಸ್ಥೆಗಳು, ಲಯನ್ಸ್ ಸಂಸ್ಥೆ ಮೊದಲಾದವುಗಳಲ್ಲಿ ಸಕ್ರಿಯ ಪಾತ್ರವಹಿಸಿದ್ದಾರೆ. ವಸತಿಹೀನರಿಗೆ, ಅಂಗಹೀನರಿಗೆ, ವೃದ್ಧರಿಗೆ ವಸತಿ ನಿರ್ಮಾಣಮಾಡಿದ್ದಾರೆ. ಸಾಹಿತ್ಯ ಚಟುವಟಿಕೆಗಳಲ್ಲಿ ಸದಾಸಕ್ತರಾದ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ 2001 ರಿಂದ 2004ರವರೆಗೆ ಶ್ರಮಿಸಿದ್ದಾರೆ. ಸಾಹಿತ್ಯ, ಧರ್ಮ, ಕಲೆ ಮೂರರಲ್ಲೂ ಸಮಾನಾಸಕ್ತರಾಗಿ ಶ್ರದ್ಧೆಯಿಂದ ದುಡಿದ ಕೀರ್ತಿ ಇವರದ್ದಾಗಿದೆ.














