ಪಿಲಿಂಗಾಲು: ಶ್ರೀ ಗಾಯತ್ರೀ ದೇವಿ ದೇವಸ್ಥಾನದಲ್ಲಿ ಅಭಿಷೇಕ್ ಗಾಣಿಗ ಇವರಿಗೆ 'ಬ್ರಹ್ಮೋಪದೇಶ.

Coastal Bulletin
ಪಿಲಿಂಗಾಲು: ಶ್ರೀ ಗಾಯತ್ರೀ ದೇವಿ ದೇವಸ್ಥಾನದಲ್ಲಿ ಅಭಿಷೇಕ್ ಗಾಣಿಗ ಇವರಿಗೆ 'ಬ್ರಹ್ಮೋಪದೇಶ.

ಬಂಟ್ವಾಳ:ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿದೇವಿ ದೇವಸ್ಥಾನದಲ್ಲಿ ಅಭಿಷೇಕ್ ಗಾಣಿಗ ಇವರಿಗೆ ಬ್ರಹ್ಮೋಪದೇಶ ನೀಡುವ ವಿನೂತನ ಕಾರ್ಯಕ್ರಮ ಮಾ 20ರಂದು ಗುರುವಾರ ನಡೆಯಿತು.

ಸ್ಥಳೀಯ ಪ್ರಗತಿಪರ ಕೃಷಿಕ ಡೊಂಬಯ ಸಪಲ್ಯ ಮತ್ತು ಲೀಲಾ ದಂಪತಿ ಎರಡನೇ ಪುತ್ರನಾಗಿರುವ ಅಭಿಷೇಕ್ ಗಾಣಿಗ ಕಂಪ್ಯೂಟರ್ ಪದವೀಧರ ನಾಗಿದ್ದು, ಬಾಲ್ಯದಿಂದಲೇ ಶುದ್ಧ ಸಸ್ಯಾಹಾರಿಯಾಗಿ ದೇವರ ಆರಾದನೆ ಬಗ್ಗೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದರು. ಭಜನೆ, ಸತ್ಸಂಗ ಮತ್ತಿತರ ಧಾರ್ಮಿಕ ಚಟುವಟಿಕೆಗಳ ಜೊತೆಗೆ ಇವರು ಸ್ವತಃ ರಚಿಸಿದ 'ಪಿಲಿಂಗಾಲು ಶ್ರೀ ಗಾಯತ್ರೀ ದೇವಿ ಭಜನಾ ಪುಸ್ತಕ' ಅವಿಭಜಿತ ಜಿಲ್ಲೆ ಮಾತ್ರವಲ್ಲದೆ ಬೆಂಗಳೂರು, ಮುಂಬೈ, ದುಬೈ, ಇಸ್ರೇಲ್ ಮತ್ತಿತರ ಕಡೆಗಳಲ್ಲಿ ಭಕ್ತರಿಂದ ಬೇಡಿಕೆ ಪಡೆದುಕೊಂಡಿದೆ.

ಇದೀಗ ಅವರ ಸ್ವ ಇಚ್ಛೆಯಂತೆ ಅವರಿಗೆ ಬ್ರಹ್ಮೋಪದೇಶ ಸಂಸ್ಕಾರ ನೀಡಲಾಗಿದೆ' ಎಂದು ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ತಿಳಿಸಿದರು. ಪುರೋಹಿತ ವಿಜಯಕೃಷ್ಣ ಐತಾಳ್ ಮಾರ್ಗದರ್ಶನದಲ್ಲಿ ಗುರುರಾಜ್ ಭಟ್ ದೆಚ್ಚಾರ್, ಶ್ರೀಪತಿ ಭಟ್ ಬೆಂಗಳೂರು ಮತ್ತಿತರರು ವಿವಿಧ

ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಇವರು 'ಗಾಯತ್ರಿ ಮಂತ್ರ' ಸಹಿತ ಬ್ರಹ್ಮೋಪದೇಶ ನೀಡಿದರು.

ಬಂಟ್ವಾಳ ತಾ.ಪಂ. ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಮಾಧವ ಎಸ್.ಮಾವೆ ಸಾಲೆತ್ತೂರು, ಕೆಡಿಪಿ ಮಾಜಿ ಸದಸ್ಯ ಉಮೇಶ ಬೋಳಂತೂರು, ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ ಕಲ್ಲಡ್ಕ, ಮಾಜಿ ಅಧ್ಯಕ್ಷ ವಿಶ್ವನಾಥ ಎಸ್.ಎ. ಬಿ.ಸಿ.ರೋಡು, ಇರಾ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಟಿ.ಸುಧಾಕರ್, ಪುರಸಭೆ ನಾಮ ನಿರ್ದೇಶಿತ ಸದಸ್ಯ ಜಗದೀಶ ಕುಂದರ್, ನಿವೃತ್ತ ಪಿಡಿಒ ವೇದವ ಗಾಣಿಗ, ಉದ್ಯಮಿ ಸುಬ್ರಹ್ಮಣ್ಯ ಕಾಡುಮಠ, ಸುಹಾಸ್ ಕಲ್ಲಡ್ಕ, ಉತ್ತಮ್ ಕಲ್ಲಡ್ಕ, ದಿನೇಶ್ ಕಾಡಬೆಟ್ಟು, ಹರೀಶ ಪಿಲಿಂಗಾಲು ಮತ್ತಿತರರು ಇದ್ದರು. ದೇವಳದ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ ಸ್ವಾಗತಿಸಿ, ವಂದಿಸಿದರು.

Leave a Comment