ಗಾಜಾ: ಕದನ ವಿರಾಮ ಘೋಷಣೆಯಾದ ಬಳಿಕವೂ ಇಸ್ರೇಲ್ ತನ್ನ ವಾಯುದಾಳಿಯನ್ನು (Israel Airstrikes) ಮುಂದುವರಿಸಿದೆ. ಗುರುವಾರ ಗಾಜಾದಲ್ಲಿ (Gaza Strip) ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 70 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಗಾಜಾಪಟ್ಟಿಯ ಉತ್ತರ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಹಲವು ಮನೆಗಳು ಹಾಗೂ ಮೂಲ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ವಾಯುದಾಳಿ ನಡೆಸಿದೆ. ಈ ದಾಳಿಯಲ್ಲಿ ಹಲವು ಹಮಾಸ್ ನಾಯಕರೂ ಹತ್ಯೆಗೀಡಾಗಿದ್ದಾರೆ. ಕಳೆದ ಜನವರಿ 19ರಂದು ಕದನ ವಿರಾಮ ಘೋಷಣೆಯಾದ ಬಳಿಕ ಮೂರು ದಿನಗಳ ಅಂತರದಲ್ಲಿ ಇಸ್ರೇಲ್ ನಡೆಸಿದ 2ನೇ ವಾಯುದಾಳಿ ಇದಾಗಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಭೀಕರ ವೈಮಾನಿಕ ದಾಳಿ
ನಡೆಸಿದ್ದ ಇಸ್ರೇಲ್, ಗಾಜಾದಲ್ಲಿ 400ಕ್ಕೂ ಅಧಿಕ ಮಂದಿಯನ್ನ ಹತ್ಯೆ ಮಾಡಿತ್ತು. ಗಾಜಾ ಪಟ್ಟಿಯಲ್ಲಿದ್ದ ಹಮಾಸ್‌ನ ಆಂತರಿಕ ಭದ್ರತಾ ಸೇವೆಗಳ ಮುಖ್ಯಸ್ಥ ಮಹಮೂದ್ ಅಬು ವತ್ಫಾ ಕೂಡ ಇಸ್ರೇಲ್ ದಾಳಿಗೆ ಬಲಿಯಾಗಿದ್ದ.
ಕದನ ವಿರಾಮ ಘೋಷಣೆಯ ಬಳಿಕ ಒಪ್ಪಂದದ ಪ್ರಕಾರ ಬಾಕಿಯಿರುವ 59 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ನಿರಾಕರಿಸಿದ ನಂತರ ಇಸ್ರೇಲ್ ದಾಳಿ ನಡೆಸಿರುವುದಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದರು.














