Coastal Bulletin

ಬಂಟ್ವಾಳ: ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ‌ ಅರೆಶಿರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ‌ ಸಂಖ್ಯೆಯನ್ನು ಹೆಚ್ಚಿಸಿ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರೆಶಿರೂರು ಗ್ರಾಮದಲ್ಲಿ ಮನೆ ಭೇಟಿ ಕಾರ್ಯಕ್ರಮ‌ ನಡೆಸಲಾಯಿತು.

ಶಾಲಾಭಿವೃದ್ದಿ ಸಮಿತಿ ಹಾಗೂ ಸ್ಥಳೀಯ ಶಿಕ್ಷಣಾಭಿಮಾನಿಗಳ ಮನವಿಯ ಮೇರೆಗೆ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿಯ ಪದಾಧಿಕಾರಿಗಳು ಅರೆಶಿರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ಶ್ರೀ ಮಹಿಷಾ ಮರ್ಧಿನಿ ಹಾಗೂ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಶಿಕ್ಷಣಾಭಿಮಾನಿಗಳು, ಎಸ್ ಡಿಎಂಸಿ ಸದಸ್ಯರು, ಗ್ರಾಮದ ಪ್ರಮುಖರ ಸಹಕಾರದೊಂದಿಗೆ ಗ್ರಾಮದ ಕೊಡೊರು, ಮಾವಿನ ಮನೆ, ಗೋಳಿ ಹೊಳೆ, ಬಂಕಿನ ಮನೆ, ಚುಚ್ಚಿ, ಅರೆಶಿರೂರು, ಹುಂಚನಿ ಮತ್ತಿತರ ಕಡೆಗಳಿಗೆ ಭೇಟಿ ನೀಡಿ ತಮ್ಮ ಮಕ್ಕಳನ್ನು ಅರೆಶಿರೂರು ಸರಕಾರಿ ಶಾಲೆಗೆ ಕಳುಹಿಸುವಂತೆ ಮನವಿ ಮಾಡಲಾಯಿತು.

ಸರಕಾರಿ ಶಾಲೆ ಉಳಿಸುವ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಲಾಯಿತು. ಪೋಷಕರಿಂದ ಪೂರಕ ಸ್ಪಂದನೆಯೂ ಸಿಕ್ಕಿತು.ಸಂಜೆ ಶಾಲೆಯಲ್ಲಿ ವಿದ್ಯಾಭಿಮಾನಿಗಳ ಸಭೆ ನಡೆಸಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ಶಿರೂರು ಸಮಿತಿ ರಚಿಸಲಾಯಿತು. ಹಿರಿಯರಾದ ಎಂ.ಆರ್. ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಉಳಿದ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಬೈಂದೂರು ಶಾಸಕ ಸುಕುಮಾರ್

ಶೆಟ್ಟಿಯವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅರೆಶಿರೂರು ಶಾಲೆಯ ಅಭಿವೃದ್ಧಿಗೆ ತನ್ನಿಂದಾಗುವ ಪ್ರಯತ್ನ ನಡೆಸುವುದಾಗಿ ತಿಳಿಸಿದರು. ಎಲ್ ಕೆ ಜಿ, ಯುಕೆಜಿ ಆರಂಭ, ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವ ಬಗ್ಗೆ ಡಿಡಿಪಿಐ ಹಾಗೂ ಶಿಕ್ಷಣಾಧಿಕಾರಿಯೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ಶಾಲೆಯಲ್ಲಿ ಮಕ್ಕಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಕಾಶ್ ಅಂಚನ್ ಅವರ ಕಾರ್ಯ ಅಭಿನಂದನೀಯ ಎಂದರು.

ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್, ಕಾರ್ಯದರ್ಶಿ ಪುರುಷೋತ್ತಮ ಅಂಚನ್, ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಮಾನಂದ ಸದಸ್ಯರಾದ ರಾಮಚಂದ್ರ ಪೂಜಾರಿ ಕರೆಂಕಿ, ನವೀನ್ ಸೇಸಗುರಿ, ದೀಪಕ್ ಸಾಲ್ಯಾನ್ ಸ್ಥಳೀಯ ಶಿಕ್ಷಣಾಭಿಮಾನಿಗಳಾದ ಎಂ.ಆರ್. ಶೆಟ್ಟಿ, ನಿತೀನ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಘವೇಂದ್ರ ಗಾಣಿಗ, ರಾಮ ಪೂಜಾರಿ, ಗಣೇಶ್ ಬಳಿಗಾರ್, ರಾಜೀವ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ, ನಿವೃತ್ತ ಶಿಕ್ಷಕ ರತ್ನಾಕರ ಶೆಟ್ಟಿ ಜನ್ಮನೆ, ಸತ್ಯರಂಜನ್ ಹೆಗ್ಡೆ, ರಾಘವೇಂದ್ರ ಶೆಟ್ಟಿಗಾರ್, ಸದಾಶಿವ, ವಸಂತ ಹೆಗ್ಡೆ, ದಿನೇಶ್, ಗೌತಮ ಶೆಟ್ಟಿ ಉಪಸ್ಥಿತರಿದ್ದರು. 


Leave a Comment