ಕವಿತೆ :ಸತೀಶ್ ಕುಲಾಲ್ ಸುಲ್ಕೇರಿ, ದುಬೈ.
ಸರಳ ಸುಂದರ ಬದುಕು
ನನ್ನದಾಗಿರಬೇಕು
ಕೆಲವೇ ಕೆಲವು ಹನಿಗಳಿಂದ
ದಾಹ ತಣಿಯಬೇಕು
ಚಿಕ್ಕ ಕೊಕ್ಕಿನಿಂದ ಹೆಕ್ಕಿ ತಿಂದು
ಹೊಟ್ಟೆ ತುಂಬುವಂತಿರಬೇಕು
ನಾನೊಂದು ಹಕ್ಕಿಯಾಗಬೇಕು
ಒಣಗಿ ಉದುರಿದ ಎಲೆಗಳಲ್ಲಿ
ಹುಲ್ಲು ಕಡ್ಡಿ ನಾರಿನಲ್ಲಿ
ಒಂದು ಚಂದದ
ಮನೆಯ ಕಟ್ಟಬೇಕು
ತಲೆಯ ಮೇಲಿನ ಸೂರಿಗಾಗಿ
ಯಾಕೆ ಇಷ್ಟೊಂದು ಒದ್ದಾಡಬೇಕು.?
ಅಂಗೈರೇಖೆಯ ಮೇಲೆ
ಭವಿಷ್ಯದ ನಂಬಿಕೆ ಯಾಕೆ ಬೇಕು?
ಸುಖದ ಕ್ಷಣಗಳಿಗಾಗಿ ಇಲ್ಲಿ
ಎಷ್ಟೊಂದು ಹೋರಾಡಬೇಕು..!
ನಾನೊಂದು ಹಕ್ಕಿಯಾಗಬೇಕು
ಕಾಗದದ ಹೂಗಳಿಗೇಕೆ
ಹೃದಯ ಕೊಡಬೇಕು..?
ನಳನಳಿಸುವ ನಿಸರ್ಗದ
ಹಸಿರು ಸಿರಿಯೇ ಕೈಯೊಳಗಿರಬೇಕು
ತೆರೆದ ನೀಲ ವಿಶಾಲ
ಆಕಾಶವೇ ನನ್ನದಾಗಬೇಕು
ಜಗದ ಜಂಜಡಗಳ ಮರೆತು
ಅಲ್ಲಿ ನಾ ಹಾರಾಡಬೇಕು
ನಾನೊಂದು ಹಕ್ಕಿಯಾಗಬೇಕು
ಜಾತಿಮತ ಭೇದ ಭಾವದ
ಬೇಲಿಗಳ ಕಿತ್ತೊಗೆಯಬೇಕು
ನನ್ನವರು,ದೂರವಾದವರು
ಮತ್ತೆ ಅಲ್ಲಿ ಒಟ್ಟು ಸೇರಬೇಕು..
ಎಲ್ಲರಂತೆ ನಾನು
ನನ್ನಂತೆ ಎಲ್ಲರಿರಬೇಕು..
ಎಲ್ಲ ಕೋಟೆ ಗಡಿಗಳ
ತಡೆಯ
ಮೀರಬೇಕು
ಈ ಜಗದ ಸರ್ವರ ಕಷ್ಟಸುಖ
ನಾನು ಆಲಿಸಬೇಕು..
ನಾನೊಂದು ಹಕ್ಕಿಯಾಗಬೇಕು
ಎಲ್ಲರ ಮನೆಯೂ
ನನ್ನ ಮನೆಯಂತೆ ಇರಬೇಕು
ಅರಮನೆ ಗುಡಿಸಲುಗಳ
ನಡುವೆ ಅಂತರ ಯಾಕೆ ಬೇಕು..?
ಬಡತನದ ಹಾಹಾಕಾರ
ಸಿರಿತನದ ಅಹಂಕಾರ ತೊಲಗಬೇಕು
ಎಲ್ಲರೂ ನನ್ನಂತೆಯೇ...
ನನ್ನ ಬದುಕು ಎಲ್ಲರಂತಿರಬೇಕು..
ನಾನೊಂದು ಹಕ್ಕಿಯಾಗಬೇಕು
ಆಕಾಶ ಮುಟ್ಟುವುದೊಂದೇ
ನನ್ನ ಗುರಿಯಾಗಬೇಕು
ಆಸೆ ಕನಸುಗಳೆಲ್ಲವ
ಗಾಳಿಯಲ್ಲಿ ತೂರಿ ಸಾಗಬೇಕು
ಕುರುಡು ಕಾಂಚಾಣದ ಹಿಂದೆ
ಹೀಗೆ ಎಷ್ಟು ಕಾಲ ಓಡಬೇಕು?
ಚಿಂತೆಗಳ ಪರ್ವತಗಳ ಮೀರಿ
ಮೇಲೆ ಹಾರಬೇಕು
ನಾನೊಂದು ಹಕ್ಕಿಯಾಗಬೇಕು
ಪ್ರತಿಕ್ಷಣ ಪ್ರತಿದಿನದ ಅಗತ್ಯಗಳು
ಎಲ್ಲೆ ದಾಟಿ ಏರದಂತಿರಬೇಕು
ಒಂದೇ ಸರಳ ಬದುಕು..
ಒಂದೇ ನನ್ನ ದಿನಚರಿಯಾಗಬೇಕು
ಬಯಸಿದ್ದು ಸಿಗದಿದ್ದರೆ ದುಃಖವಿಲ್ಲ
ಪಡೆದ ಸಂತೋಷವಷ್ಟೇ ಇರಬೇಕು
ಪರಿಸ್ಥಿತಿಯ ಕೈಗೊಂಬೆಯಂತೆ
ಕುಣಿದಿದ್ದು ಸಾಕು...
ನನ್ನ ಬದುಕು ಕೇವಲ ನನ್ನದಾಗಿರಬೇಕು
ನಾನೊಂದು ಹಕ್ಕಿಯಾಗಬೇಕು
ಸರಳ ಸುಂದರ ಬದುಕು
ಅಷ್ಟೇ ನನ್ನದಾಗಿರಬೇಕು..!!
















