ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಗ್ರಾಮದ ಬಾಚಕೆರೆ ಸರಪಾಡಿಯಲ್ಲಿ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಶಿಲಾಮಯವಾಗಿ ನಿರ್ಮಾಣಗೊಂಡಿದ್ದು, ಮಾ.22 ರಿಂದ ಮಾ.28 ರ ವರೆಗೆ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ ವಿವಿಧ ವೈದಿಕ ವಿಧಿ ವಿಧಾನ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ ಅವರು ತಿಳಿಸಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಶುಭಾಶೀರ್ವಾದದೊಂದಿಗೆ ಸುಮಾರು ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ಸುಂದರವಾಗಿ ನಿರ್ಮಾಣಗೊಂಡಿರುವ ಈ ಕ್ಷೇತ್ರದಲ್ಲಿ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ಮಾರ್ಗದರ್ಶನ, ಶ್ರೀ ಕ್ಷೇತ್ರದ ಪ್ರಧಾನ ತಂತ್ರಿ ಸರಪಾಡಿ ಅರಮನೆ ವೇ.ಮೂ.ಶಿವಪ್ರಸಾದ ಐತಾಳರ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ನೆರವೇರಲಿದೆ ಎಂದರು.
ಕ್ಷೇತ್ರದಲ್ಲಿರಿಸಲಾದ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಂತೆ ನೂತನ ಶಿಲಾಮಯ ದೇಗುಲ ನಿರ್ಮಿಸಲು ಸಂಕಲ್ಪಿಸಿ,ಶಿಲಾಮಯ ಗರ್ಭಗುಡಿ,ಮುಖ ಮಂಟಪ, ಸುತ್ತು ಪೌಳಿ,ವಸಂತ ಮಂಟಪ, ತೀರ್ಥಬಾವಿ ಕಾಮಗಾರಿ ಪೂರ್ಣಗೊಂಡಿದೆ ಸುಂದರ ಪರಿಸರದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ ಎಂದರು.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಪ್ರ.ಕಾರ್ಯದರ್ಶಿ ಸರಪಾಡಿ ಆಶೋಕ ಶೆಟ್ಟಿ ಅವರು ಮಾತನಾಡಿ, ಈ ಕ್ಷೇತ್ರವು ಪೂಜೆ, ಉತ್ಸವಾದಿಗಳಿಗಷ್ಟೇ ಸೀಮಿತವಾಗದೆ ಬದುಕಿನಲ್ಲಿ ನೊಂದು, ಬೆಂದು ಬಂದವರಿಗೆ ಶಾಂತಿ ನೆಮ್ಮದಿ ನೀಡುವ ತಾಣವಾಗಿದೆ.
ಕಲೆ-ಸಾಹಿತ್ಯ-ಸಾಂಸ್ಕೃತಿಕ-ಶೈಕ್ಷಣಿಕ ಕಾರ‍್ಯಕ್ರಮಗಳೊಂದಿಗೆ ಕ್ಷೇತ್ರ ಸ್ವಸ್ಥ ಸಮಾಜ ನಿರ್ಮಾಣದ ಕೇಂದ್ರವಾಗಿದೆ. ನೊಂದವರ ಬದುಕಿಗೆ ಬೆಳಕಾಗುತ್ತಾ, ಅಶಕ್ತರ ಬದುಕಿಗೆ ಅಶಾಕಿರಣವಾಗುತ್ತಾ, ಸಾಮಾಜಿಕ ಪ್ರಗತಿಗೆ ಕ್ಷೇತ್ರ ವಿಶೇಷವಾದ ಕೊಡುಗೆಯನ್ನು ನೀಡುತ್ತಿದೆ ಎಂದರು.
ಹಸಿರು ಹೊಣಿಕೆ ಮೆರವಣಿಗೆ : ಮಾ.20
ರಂದು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.ಅಂದು ಬೆಳಿಗ್ಗೆ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪ್ರಧಾನ ಕಲಶ, ಪಾಣಿಪೀಠದ ಬೆಳ್ಳಿಯ ಹೊದಿಕೆ, ಉತ್ಸವಮೂರ್ತಿ ಮತ್ತು ಪಲ್ಲಕ್ಕಿಯೊಂದಿಗೆ ಮೆರವಣಿಗೆಯು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಹೊರಟು ಕೈಕಂಬ, ಪೊಳಲಿ ಮಾರ್ಗವಾಗಿ ಬಿ.ಸಿ. ರೋಡ್ ಶ್ರೀ ರಕ್ತೇಶ್ವರೀ ದೇವಸ್ಥಾನದ ಬಳಿ ಸಂಪನ್ನಗೊಂಡು ಅಲ್ಲಿಂದ ಮಧ್ಯಾಹ್ನ 02:30ಗೆ ಸರಿಯಾಗಿ ವಿವಿಧ ವಾದ್ಯಘೋಷಗಳಿಂದ ಹಸಿರು ಹೊರೆಕಾಣಿಕೆಯೊಂದಿಗೆ ಶ್ರೀ ಕ್ಷೇತ್ರ ಬಾಚಕೆರೆಗೆ ಹೊರಡಲಿದೆ ಎಂದು ಅವರು ಮಾಹಿತಿ ನೀಡಿದರು.
ಬ್ರಹ್ಮಕಲಶದ ಪ್ರಯುಕ್ತ ಪ್ರತಿದಿನ ಬೆಳಿಗ್ಗೆ ವೈಧಿಕ ವಿಧಿ ವಿಧಾನಗಳು,ಸಂಜೆ ವಿವಿಧ ಕ್ಷೇತ್ರದ ಮಠಾಧೀಶರು,ಜನಪ್ರತಿನಿಧಿಗಳು ,ಧಾರ್ಮಿಕ,ಸಾಮಾಜಿಕ ಮುಖಂಡರು,ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ,ಬಳಿಕ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯಲಿದೆ ಎಂದರು.
ಮಾ.25 ರಂದು ಬೆಳಗ್ಗೆ ಶ್ರೀ ಗಣಪತಿ, ಶ್ರೀ ದುರ್ಗಾಪರಮೇಶ್ವರಿ ದೇವರ ಪ್ರತಿಷ್ಠೆ, 27 ರಂದು ಬ್ರಹ್ಮ ಕಲಶಾಭಿಷೇಕ ನಡೆಯಲಿದ್ದು,ಈ ಸಂದರ್ಭ ಪ್ರತಿದಿನವು ನಿರಂತರ ಅನ್ನ ಸಂತರ್ಪಣೆ ಇರಲಿದೆ ಎಂದು ಆಶೋಕ್ ಶೆಟ್ಟಿ ಮಾಹಿತಿ ನೀಡಿದರು.
ಮಾ.೨೯ರಂದು ಸಂಜೆ ರಂಗಪೂಜೆ, ರಾತ್ರಿ ಬಾಚಕೆರೆ ಮೂಲ ಸಾನ್ನಿಧ್ಯದಲ್ಲಿ ಮೈಸಂದಾಯ, ರಕ್ತೇಶ್ವರಿ, ಪಂಜುರ್ಲಿ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ,ಪದಾಧಿಕಾರಿಗಳಾದ ಪುರುಷೋತ್ತಮ ಬಿ.ಮಜಲು, ಸಂತೋಷ್ ಕುಲಾಲ್ ,ರಮೇಶ್, ಚಂದ್ರಹಾಸ ಶೆಟ್ಟಿ ಮೊದಲಾದವರಿದ್ದರು.














