ಬಂಟ್ವಾಳ :ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಗುರುವಾರ ವಿದ್ವಾನ್ ಪಂಜ ಭಾಸ್ಕರ್ ಭಟ್ ಬ್ರಹ್ಮಕಲಶದ ಮಹತ್ವ ವಿಷಯದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು.
ಅಣುರೇಣು ತೃಣಕಾಷ್ಠದಲ್ಲೂ ಭಗವಂತನಿದ್ದಾನೆ. ಜನಸಾಮಾನ್ಯರಿಗೆ ಅದನ್ನು ಗುರುತಿಸಲು ಶಕ್ಯವಾಗುವುದಿಲ್ಲ. ಆ ಕಾರಣದಿಂದ ಪ್ರತಿಮೆಯನ್ನು ಆರಾಧಿಸುವ ಅವಕಾಶವನ್ನು ಜ್ಞಾನಿಗಳು ನಮಗೆ ನೀಡಿದ್ದಾರೆ.ಪ್ರತಿಮೆಯನ್ನು ಮಾಧ್ಯಮವಾಗಿಸಿ ದೇವಾಲಯ ನಿರ್ಮಿಸಿ ಭಗವಂತನ ಆರಾಧಿಸುವ ಮೂಲಕ ಜೀವನದಲ್ಲಿ ಧನ್ಯತೆಯ ಭಾವವನ್ನು ಪಡೆಯಬಹುದು. ದೇವರ ಬಿಂಬವನ್ನು ಶಾಸ್ತ್ರೀಯವಾಗಿ ಸಂಯೋಜಿಸಿ ವೈಜ್ಞಾನಿಕವಾಗಿ ದೇವಸ್ಥಾನದ ವ್ಯವಸ್ಥೆ ರೂಪಿಸುವ ಮೂಲಕ
ದೇವರ ಸಾನಿಧ್ಯ ಪರಿಪೂರ್ಣತೆಯನ್ನು ಹೊಂದುವ ವ್ಯವಸ್ಥೆಯನ್ನು ಬ್ರಹ್ಮಕಲಶ ಎಂದು ಕರೆಯಲಾಗುತ್ತದೆ. ದೇವರ ನಾಮ ಸ್ಮರಣೆಯಿಂದ ಜೀವನಾದರ್ಶಗಳು, ಮಾನಸಿಕ ಸಾಧನಾ ಪ್ರೇರಣೆಗಳು ಲಭಿಸುತ್ತದೆ ಎಂದು ಅವರು ನುಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರರಾದ ಪದ್ಮನಾಭ ರಾವ್ ಕನಪಾಡಿ, ಸಂಚಾಲಕ ತೇವು ತಾರಾನಾಥ ಕೊಟ್ಟಾರಿ ಫರಂಗಿಪೇಟೆ ಉಪಸ್ಥಿತರಿದ್ದರು. ಸಂತೋಷ್ ಕೋಟ್ಯಾನ್ ತುಂಬೆ ಕಾರ್ಯಕ್ರಮ ನಿರ್ವಹಿಸಿದರು.














