ಸಂಗೀತಮಯ ಭಾಗವತಿಕೆಯ ಮೇರು ಪ್ರತಿಭೆ ಗಾನಕೋಗಿಲೆ ದಿನೇಶ ಅಮ್ಮಣ್ಣಾಯ ನಿಧನ.

Coastal Bulletin
ಸಂಗೀತಮಯ ಭಾಗವತಿಕೆಯ ಮೇರು ಪ್ರತಿಭೆ ಗಾನಕೋಗಿಲೆ ದಿನೇಶ ಅಮ್ಮಣ್ಣಾಯ ನಿಧನ.

ಬಂಟ್ವಾಳ : ಸಂಗೀತಮಯವಾದ ಭಾಗವತಿಕೆಯ ಮುಖೇನ ರಸಿಕರ ಮನವನ್ನು ಮೆಚ್ಚಿಸಿ ಕೀರ್ತಿ ಸಂಪನ್ನರಾಗಿರುವ ಯಕ್ಷರಸರಾಗ ಚಕ್ರವರ್ತಿ, ಗಾನಕೋಗಿಲೆ, ಯಕ್ಷಕೋಗಿಲೆ, ಮಧುರಗಾನದ ಐಸಿರಿ, ಯಕ್ಷ ಸಂಗೀತ ಕಲಾ ಕೌಸ್ತುಭ ದಿನೇಶ ಅಮ್ಮಣ್ಣಾಯರು (68)ಅ.16ರಂದು ಗುರುವಾರ ನಿಧನ ಹೊಂದಿದರು.

ಯಕ್ಷಕಲಾ ಪೊಳಲಿ ಸಂಸ್ಥೆಯ ಹುಟ್ಟಿಗೆ ಪ್ರೇರಣೆ:

ಯಕ್ಷಗಾನ ರಂಗದಲ್ಲಿ ತನ್ನದೆ ಛಾಪು ಮೂಡಿಸಿ ಎಲ್ಲರನ್ನು ರಂಜಿಸುತಿದ್ದ ಅಮ್ಮಣ್ಣಾಯರ ಪ್ರತಿಭೆ ಹಾಗೂ ಅಭಿಮಾನದ ಪ್ರೇರಣೆಯಿಂದ ಹುಟ್ಟಿದ ಸಂಸ್ಥೆಯೇ ಯಕ್ಷಕಲಾ ಪೊಳಲಿ, ಈ ಸಂಸ್ಥೆಯ ಸ್ಥಾಪನೆಗೆ ಪರೋಕ್ಷವಾಗಿ ಕಾರಣಿಕರ್ತರಾಗಿದ್ದ ಅಮ್ಮಣ್ಣಾಯರು ಕಳೆದ 30 ವರ್ಷಗಳಿಂದಲೂ ನಿರಂತರವಾಗಿ ಪೊಳಲಿ ಯಕ್ಸೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಅಮ್ಮಣ್ಣಾಯ ಜೀವನ ಸಾಧನೆ:

1959ರಲ್ಲಿ ನಾರಾಯಣ ಅಮ್ಮಣ್ಣಾಯ ಮತ್ತು ಕಾವೇರಿಅಮ್ಮ ದಂಪತಿಯ ಸುಪುತ್ರರಾಗಿ ಇವರು ಜನಿಸಿದರು. ಹತ್ತನೆಯ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ವಿದ್ವತ್ತಿನ ಮನೆತನದಲ್ಲೇ ಹುಟ್ಟಿದವರಾಗಿದ್ದಾರೆ. ಇವರ ತಂದೆ ಮೃದಂಗ ವಾದಕರು. ಚಿಕ್ಕಪ್ಪ ಅರ್ಥಧಾರಿ ಮತ್ತು ಭಾಗವತರು. ಹಿರಿಯ ಸಹೋದರಿ ರಾಜೀವಿ ಎಂಬವರು ಸಂಗೀತಗಾರರಾಗಿದ್ದಾರೆ. ಹಾಗಾಗಿ ಇವರಲ್ಲೂ ಕಲಾಪ್ರತಿಭೆ ಚಿಗುರಿತು.

ದಾಮೋದರ ಮಂಡೆಚ್ಚರಿಂದ ಭಾಗವತಿಕೆಯ ಅಭ್ಯಾಸ, ಹರಿನಾರಾಯಣ ಬೈಪಾಡಿತ್ತಾಯರಿಂದ ಮೃದಂಗದ ಅಭ್ಯಾಸ ಮಾಡಿರುವ ಇವರು ಸಹೋದರಿಯಿಂದ ಸಂಗೀತದ ಅಭ್ಯಾಸವನ್ನು ಮಾಡಿದ್ದಾರೆ. ಚಿಕ್ಕಪ್ಪ ವಿಷ್ಣು ಅಮ್ಮಣ್ಣಯರ ಪ್ರೋತ್ಸಾಹದೊಂದಿಗೆ ಉತ್ತೇಜಿತರಾದ ಅಮ್ಮಣ್ಣಾಯರು ಯಕ್ಷಗಾನದ ಕಲಾಸಾಧನೆಯಲ್ಲಿ ಪ್ರೌಡಿಮೆಯನ್ನು ಸಾಧಿಸಿ,

ಬೆಳೆಯುತ್ತಾ ಬಂದರು.

ಪುತ್ತೂರು ಮೇಳ-1ವರ್ಷ, ಕರ್ನಾಟಕ ಮೇಳ-21 ವರ್ಷ, ಕದ್ರಿ ಮೇಳ-2ವರ್ಷ, ಕುಂಟರು ಮೇಳ-2ವರ್ಷ, ಎಡನೀರು ಮೇಳ-5ವರ್ಷ ಹೀಗೆ ಮೇಳ ತಿರುಗಟದ ಹಿನ್ನೆಲೆ ಇದೆ. ಕರ್ನಾಟಕ ಮೇಳದಿಂದ ವರ್ಚಸ್ಸನ್ನು ಮೆರೆಸುತ್ತಾ ಬಂದ ಅಮ್ಮಣ್ಣಾಯರು ಈವರೆಗೂ ತಮ್ಮ ವರ್ಚಸ್ಸನ್ನು ಉಳಿಸಿ ಬೇಡಿಕೆಯ ಕಲಾವಿದರಾಗಿದ್ದಾರೆ.

ತುಳು ಮತ್ತು ಕನ್ನಡ ಪ್ರಸಂಗಗಳನ್ನು ಸಮರ್ಥವಾಗಿ ಆಡಿಸಬಲ್ಲ ಇವರು ರಾಗ ಸಂಯೋಜನೆಯಲ್ಲಿ ಪಳಗಿದವರಾಗಿದ್ದಾರೆ. ಕಂಠ ಮಾಧುರದಿಂದ ಪ್ರೇಕ್ಷಕರ ಮನವನ್ನು ತಣಿಸುವ ಪ್ರೌಢ' ಭಾಗವತರು ಅಮ್ಮಣ್ಣಾಯರಾಗಿದ್ದಾರೆ.ಕೃಷಿಕರಾಗಿರುವ ಇವರು ಶ್ರೀಮತಿ ಸುಧಾ ಎಂಬವರನ್ನು ವರಿಸಿ ಅಕ್ಷತಾ ಮತ್ತು ಅಮಿತಾ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ.

ಭಾಗವತಿಕೆಯು ಇವರ ಕಲಾಸಾಧನೆಗೆ ಪ್ರತಿಫಲವಾಗಿ 40 ಕ್ಕೂ ಮಿಕ್ಕಿ ಸಂಮ್ಮಾನಗಳು ಸಂದಿವೆ. ಮುಂಬಯಿ, ಬೆಂಗಳೂರು, ಮಂಗಳೂರು ಸೇರಿದಂತೆ ಎಡನೀರು, ಉಡುಪಿ ಮೊದಲಾದೆಡೆಯಲ್ಲಿ ಅಭಿಮಾನಿಗಳಿಂದ ಗೌರವ ಪುರಸ್ಕಾರಕ್ಕೆ ಒಳಗಾಗಿದ್ದಾರೆ.

ಯಕ್ಷರಸರಾಗ ಚಕ್ರವರ್ತಿ, ಗಾನಕೋಗಿಲೆ, ಯಕ್ಷಕೋಗಿಲೆ, ಮಧುರಗಾನದ ಐಸಿರಿ, ಯಕ್ಷ ಸಂಗೀತ ಕಲಾ ಕೌಸ್ತುಭ ಮುಂತಾದ ಬಿರುದುಗಳಿಂದ ಜನಮನ್ನಣೆಗೆ ಒಳಗಾಗಿರುವ ದಿನೇಶ ಅಮ್ಮಣ್ಣಾಯರ ಸಾಧನೆ ಔಚಿತ್ಯಪೂರ್ಣವಾಗಿದೆ.

Leave a Comment