ಮಂಗಳೂರು:ನಗರದ ಹೊರವಲಯದ ಕುಲಶೇಖರ ತೋಕೂರು ನಡುವೆ ರೈಲು ಹಳಿ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ಈ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದೆ.
ಗುಡ್ಡಕ್ಕೆ ಕಟ್ಟಿದ್ದ ತಡೆಗೋಡೆ ಸೇರಿದಂತೆ ಗುಡ್ಡ ಕುಸಿದು ಬಿದ್ದು ಭಾರೀ ಪ್ರಮಾಣದ ಮಣ್ಣು ಹಳಿ ಮೇಲೆ ಬಿದ್ದಿದೆ.ಮಂಗಳೂರಿನಿಂದ ಕೊಂಕಣ ರೈಲ್ವೇ ಮೂಲಕ ಕಾರವಾರ, ಮುಂಬೈ ಸಾಗುವ ರೈಲುಗಳ ಸಂಚಾರಕ್ಕೆ ತೊಡಕಾಗಿದೆ. ಇಂದು ಬೆಳಗ್ಗೆ ಗುಡ್ಡ ಕುಸಿದ ಘಟನೆ ನಡೆದಿದ್ದು, ಈ ಭಾಗದಲ್ಲಿ ಸಂಚರಿಸುವ ರೈಲುಗಳನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ. ಇದೇ ವೇಳೆ, ರೈಲು ಹಳಿಯಿಂದ ಮಣ್ಣು ತೆರವು ಮಾಡುವ ಕಾರ್ಯ ನಡೆಸಲಾಗುತ್ತಿದೆ.
ರೈಲು ಹಳಿಯ ಗುಡ್ಡದ ಬದಿಗೆ
ಕಾಂಕ್ರೀಟ್ ತಡೆಗೋಡೆ ಕಟ್ಟಲಾಗಿದ್ದು ಕಾಂಕ್ರೀಟ್ ಗೋಡೆಯೇ ಕುಸಿದು ಬಿದ್ದಿದೆ. ಹಳಿಯ ಬದಿಯಲ್ಲಿ ಮಳೆ ನೀರು ಹರಿಯುತ್ತಿದೆ. ಸಂಜೆ ಹೊತ್ತಿಗೆ ಮಣ್ಣು ತೆರವು ಕಾರ್ಯಾಚರಣೆ ಮುಗಿಯಬಹುದು ಎನ್ನುವ ಮಾಹಿತಿಯನ್ನು ರೈಲ್ವೇ ಅಧಿಕಾರಿಗಳು ನೀಡಿದ್ದಾರೆ. ಕೊಂಕಣ ರೈಲ್ವೇ ಮೂಲಕ ದೆಹಲಿಗೆ ತೆರಳುವ ನಿಜಾಮುದ್ದೀನ್ ಎಕ್ಸ್ ಪ್ರೆಸ್ ಸೇರಿದಂತೆ ಕೇರಳದಿಂದ ಮಂಗಳೂರು- ಮುಂಬೈಗೆ ಸಂಚರಿಸುವ ರೈಲುಗಳನ್ನು ಕಣ್ಣೂರಿನಲ್ಲಿ ಡೈವರ್ಟ್ ಮಾಡಲಾಗಿದ್ದು, ಮೈಸೂರು ಮೂಲಕ ಸಾಗಲಿದೆ.
















