ಬಂಟ್ವಾಳ :ಇಲ್ಲಿನ ಕಾವಳಮೂಡೂರು ಗ್ರಾಮ ಪಂಚಾಯಿತಿ ಪ್ರತ್ಯೇಕ ಉದ್ದೇಶಗಳಿಗೆ ಪ್ರತಿಭಟನೆ ನಡೆಸಲು ಬಂದಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಪರಸ್ಪರ ವಾಗ್ವಾದ ಮತ್ತು ತಳ್ಳಾಟ ನಡೆದ ಪ್ರಸಂಗ ಬುಧವಾರ ನಡೆದಿದೆ.
ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಬುಧವಾರ ಬೆಳಿಗ್ಗೆ ಸಿದ್ದತೆ ನಡೆಸಿದ್ದರು.
ಇದೇ ವೇಳೆ ಕಾವಳಮೂಡೂರು ಗ್ರಾಮ ಪಂಚಾಯಿತಿನಲ್ಲಿ ಕುಡಿಯುವ ನೀರು ಮತ್ತು ಮನೆ ತೆರಿಗೆ ಏಕಾಏಕಿ ಏರಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾಯ೯ಕತ೯ರು ಪ್ರತಿಭಟನೆಗೆ ಮುಂದಾಗಿದ್ದರು.
ಗ್ರಾಮ ಪಂಚಾಯಿತಿ ಕಚೇರಿ ಮತ್ತು ಸಹಕಾರಿ ಸಂಘ ಒಂದೇ ಅವರಣದೊಳಗೆ ಇರುವುದರಿಂದ ಎರಡೂ ಪಕ್ಷದ ಕಾರ್ಯಕರ್ತರು ಜಮಾಯಿಸಿ ಕೆಲ ಹೊತ್ತು ಗೊಂದಲ, ಬಿಗುವಿನ ವಾತಾವರಣ ಉಂಟಾಯಿತು. ಬಿಜೆಪಿ ಕಾರ್ಯಕರ್ತರ ಗುಂಪಿನಲ್ಲಿ ಆರ್.ಟಿ.ಐ. ಕಾರ್ಯಕರ್ತ ಪದ್ಮನಾಭ ಮಯ್ಯ ಕಾಣಿಸಿಕೊಂಡಿದ್ದು ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿತು. ಇದನ್ನು ಪ್ರಶ್ನಿಸಿದ ಕಾಂಗ್ರೆಸ್ ಕಾಯ೯ಕತ೯ರನ್ನು ಬಿಜೆಪಿ ಕಾರ್ಯಕರ್ತರು ಆಕ್ಷೇಪಿಸಿದರು.ಇದೇ ವೇಳೆ ಪರಸ್ಪರ ವಾಗ್ವಾದ,ತಳ್ಳಾಟ ನಡೆಯಿತು.
ಈ ನಡುವೆ ಪದ್ಮನಾಭ ಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಉಭಯ ಪಕ್ಷದ ನಾಯಕರ ನಡುವೆ ಆರೋಪ ಪ್ರತ್ಯಾರೋಪ,ಪರಸ್ಪರ ಧಿಕ್ಕಾರ ಕೂಗಿದರು.
ಪುಂಜಾಲಕಟ್ಟೆ ಪೊಲೀಸ್ ಠಾಣೆ ಎಸ್.ಐ.ಸೌಮ್ಯ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು. ಸ್ಥಳದಲ್ಲಿ ಜಮಾಯಿಸಿದ್ದ ಕಾರ್ಯಕರ್ತರನ್ನು ಪೊಲೀಸರು ಲಾಟಿ
ಬೀಸಿ ಚದುರಿಸಿದರು.
ಆರ್.ಟಿ.ಐ ಕಾರ್ಯಕರ್ತ ಪದ್ಮನಾಭ ಮಯ್ಯ ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಾದ ಸದಾನಂದ ಶೆಟ್ಟಿ, ಬಿ.ಆರ್.ಅಂಚನ್ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದರು.
ಕಾವಳಮೂಡೂರು ಸೊಸೈಟಿ ಅಧ್ಯಕ್ಷ ಬಿ.ಪದ್ಮಶೇಖರ್ ಜೈನ್ , ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಸುದರ್ಶನ ಬಜ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಪ್ರಮುಖರಾದ ರಮಾನಾಥ ರಾಯಿ, ಯಶೋಧರ ಕರ್ಬೆಟ್ಟು, ಸೀತಾರಾಮ ಪೂಜಾರಿ, ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ದೇವಾಡಿಗ, ಉಪಾಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿ, ಸದಸ್ಯರಾದ ಶೇಷಗಿರಿ, ಗಣೇಶ್ ದೇವಾಡಿಗ, ಪ್ರಶಾಂತ್ ಶೆಟ್ಟಿ, ದಯಾನಂದ ಎರ್ಮೆನಾಡು, ಶಾಂತಪ್ಪ ಹಟ್ಟದಡ್ಕ, ಕಾರ್ತಿಕ್ ಬಲ್ಲಾಳ್, ಧನಂಜಯ ಬಲ್ಲಾಳ್, ಶುಭಕರ ಶೆಟ್ಟಿ, ಅಶ್ವಥ್ ರಾವ್, ದಿನೇಶ್ ಶೆಟ್ಟಿ ದಂಬೆದಾರ್ ಸಹಿತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪ್ರಮೋದ್ ಕುಮಾರ್, ಹೇಮಂತ್ ಕುಮಾರ್ ದಯಾನಂದ ಶೆಟ್ಟಿ, ಕೃಷ್ಣ ನಾಯ್ಕ, ಪುರುಷೋತ್ತಮ ಕೊಂಬೇಲ್, ಚಂದ್ರಹಾಸ, ಸತೀಶ್ ಪೂಜಾರಿ, ಉಮ್ಮಣ, ಸಂತೋಷ್ ಪೂಂಜಾ , ಯಾಕುಬ್ ಸಾಹೇಬ್, ಪುತ್ತುಮೋನು, ಇಸ್ಮಾಯಿಲ್ ಸಿದ್ದಿಕ್, ಶಿವರಾಮ ಶೆಟ್ಟಿ, ಶರಾಫತ್ , ಮಸೂದ್ ಮತ್ತಿತರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.















