Coastal Bulletin

ಬಂಟ್ವಾಳ:ಇಲ್ಲಿನ ಕರಿಯಂಗಳ ಗ್ರಾಮದ ಪೊಳಲಿ ಕ್ಷೇತ್ರದ ಸಾವಿರ ಸೀಮೆಗೆ ಒಳಪಟ್ಟ ಮಂಗಾಜೆಯಲ್ಲಿ ಶ್ರೀ ಕೊರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ಹಾಗೂ ವರ್ಷಾವಾಧಿ ನೇಮೋತ್ಸವವು ತಾ 15-02-2022ರಿಂದ 20-02-2022ರ ವರೆಗೆ ನಡೆಯಲಿದೆ.

ಸುಮಾರು 50ವರ್ಷಗಳ ಇತಿಹಾಸ ಇರುವ ಕೊರ್ದಬ್ಬು ದೈವಸ್ಥಾನವು ಇದೀಗ ರೂ 50ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡು ವೇದಮೂರ್ತಿ ಡಾ. ವೆಂಕಟೇಶ ತಂತ್ರಿ ಪೊಳಲಿ ಇವರ ನೇತೃತ್ವದಲ್ಲಿ ಪುನರ್ ಪ್ರತಿಷ್ಠೆ ಹಾಗೂ ಕಲಾಶಾಭಿಷೇಕ ನಡೆಯಲಿದ್ದು ಸುಮಾರು 5 ರಿಂದ 6 ಸಾವಿರ ಭಕ್ತರು ಸೇರುವ ನಿರೀಕ್ಷೆ ಇದೆ.

ಹೊರೆಕಾಣಿಕೆ :ತಾ 15ರಂದು ಮಂಗಳವಾರ ಸಂಜೆ 4ಗಂಟೆಗೆ ಶ್ರೀ ರಾಮಕೃಷ್ಣ ತಪೋವನ ಪೊಳಲಿಯ ಶ್ರೀ ವಿವೇಕಾಚೈತನ್ಯಾನಂದ ಸ್ವಾಮೀಜಿ ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ಕೊಡಲಿದ್ದಾರೆ. ಹಸಿರುವಾಣಿ ಹೊರೆ ಕಾಣಿಕೆಯು ಪೊಳಲಿಯಿಂದ ಹೊರಟು ಪುಂಚಮೆ ಮಾರ್ಗವಾಗಿ ದೈವಸ್ಥಾನಕ್ಕೆ ಆಗಮಿಸಲಿದೆ. ಸಂಜೆ 6ಕ್ಕೆ ದ. ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಶ್ರೀ ಅ.ನ. ಭ ಪೊಳಲಿ ಇವರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.7ಗಂಟೆಯಿಂದ ನಮ್ಮ ಕಲಾವಿದೆರ್ ಬೆದ್ರ ಇವರ 'ಪಾಂಡುನ ಅಲಕ್ಕ ಪೋಂಡು'ಎಂಬ ಹಾಸ್ಯ ನಾಟಕ ನಡೆಯಲಿದೆ.

ತಾ 16ರಂದು ಬುಧವಾರ ಬೆಳಿಗ್ಗೆ ಬಿಂಬ ಶುದ್ದಿ, ಕಲಾಶಭಿಷೇಕ, ಅಧಿವಾಸ ಹೋಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಡ್ಯಾನ್ಸ್ ಅಕಾಡೆಮಿ ಎಡಪದವು ಇವರಿಂದ 'ನೃತ್ಯ ಗಾನವೈಭವ' ಹಾಗೂ ರಾಜಶ್ರೀ ಮೋಕೆದ ಕಲಾವಿದೆರ್ ಪೊಳಲಿ ಇವರಿಂದ 'ಬಂಗಾರ್ ಬಾಬು'ತುಳು ಹಾಸ್ಯ ನಾಟಕ ನಡೆಯಲಿದೆ.

ತಾ 17ರಂದು ಗುರುವಾರ ಬೆಳಿಗ್ಗೆ 8.45ಕ್ಕೆ ಸಪರಿವಾರ ಕೊರ್ದಬ್ಬು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ನಡೆದು ಶ್ರೀ ದೈವಗಳ ದರ್ಶನ ಸೇವೆ ನಡೆಯಲಿದೆ. ಮಧ್ಯಾಹ್ನ 12.30ಗೆ

ಪಲ್ಲಪೂಜೆ ನಡೆದು ಮಹಾ ಅನ್ನಸಂತರ್ಪಣೆ ನಡೆಯಲಿದೆ. 2 ಗಂಟೆಯಿಂದ ಶ್ರೀ ಜಗದೀಶ ಆಚಾರ್ಯ ಪುತ್ತೂರು ಬಳಗದಿಂದ ಭಕ್ತಿ ರಸ ಸಂಜೆ ನಡೆಯಲಿದೆ. ಸಂಜೆ 5ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮನಂದ ಸರಸ್ವತಿ ಸ್ವಾಮೀಜಿ ಶ್ರೀ ರಾಮ ಕ್ಷೇತ್ರ ನಿತ್ಯಾನಂದ ನಗರ ಧರ್ಮಸ್ಥಳ ಇವರು ಆಶೀರ್ವಚನ ನೀಡಲಿದ್ದಾರೆ, ಲೋಕ ಸಭಾ ಸದಸ್ಯ ಹಾಗೂ ಬಿ ಜೆ ಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ ರಮಾನಾಥ ರೈ, ಬಂಟ್ವಾಳ ತಶೀಲ್ದಾರ್ ರಶ್ಮಿ ಸಹಿತ ಹಲವು ಮಂದಿ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ರಾತ್ರಿ 9 ಗಂಟೆಯಿಂದ ಕೊರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ಹಾಗೂ ರಾಹು 'ದೈವಗಳ ಗಗ್ಗರ ಸೇವೆ' ನಡೆಯಲಿದೆ

ತಾ 18ರಂದು ಶುಕ್ರವಾರ ಸಂಜೆ 6ಗಂಟೆಯಿಂದ ರಾತ್ರಿ 11ಗಂಟೆ ವರೆಗೆ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ 'ಶುಕ್ರನಂದನೆ' ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.

ತಾ 19ರಂದು ಶನಿವಾರ ರಾತ್ರಿ 10ಗಂಟೆಯಿಂದ ಶ್ರೀ ಕೊರ್ದಬ್ಬು ತನ್ನಿಮಾನಿಗ ದೈವಗಳ ವಾರ್ಷಿಕ ನೇಮೋತ್ಸವ ಹಾಗೂ ತಾ 20ರಂದು ಆದಿತ್ಯವಾರ ರಾತ್ರಿ 8 ಗಂಟೆಯಿಂದ ಗುಳಿಗ ಪಂಜುರ್ಲಿ ಮತ್ತು ರಾಹು ದೈವಗಳ ನೇಮೋತ್ಸವ ನಡೆಯಲಿದೆ ಎಂದು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸುಕೇಶ್ ಚೌಟ ಬಡಕಬೈಲ್ ಕೋಸ್ಟಲ್ ಬುಲೆಟಿನ್ ಗೆ ಪ್ರಕಟನೆ ತಿಳಿಸಿದ್ದಾರೆ.



Leave a Comment