ಫರಂಗಿಪೇಟೆಯಲ್ಲಿ ಹನುಮನಿಗೊಂದು ಭವ್ಯವಾದ ಶೀಲಾಮಯ ದೇವಸ್ಥಾನ. ಆಸ್ತಿಕ ಭಕ್ತರ ಮನದಲ್ಲಿ ಮನೆ ಮಾಡಿದೆ ಸಂಭ್ರಮ, ಸಡಗರ, ಸಂಚಲನ.

ಸಂತೋಷ್ ಕುಲಾಲ್ ನೆತ್ತರಕೆರೆ.
ಫರಂಗಿಪೇಟೆಯಲ್ಲಿ ಹನುಮನಿಗೊಂದು ಭವ್ಯವಾದ ಶೀಲಾಮಯ ದೇವಸ್ಥಾನ. ಆಸ್ತಿಕ ಭಕ್ತರ ಮನದಲ್ಲಿ ಮನೆ ಮಾಡಿದೆ ಸಂಭ್ರಮ, ಸಡಗರ, ಸಂಚಲನ.

ಭಾರತವು ಸಹಸ್ರ ಸಹಸ್ರ ಸಂಖ್ಯೆಯ ದೇವಸ್ಥಾನಗಳ ನೆಲೆವೀಡು.ವಿಶ್ವದಲ್ಲಿಯೇ ಸಾವಿರಾರು ವರುಷ ಪುರಾತನ ದೇವಾಲಯ ಮತ್ತು ಆರಾಧನಾ ಕೇಂದ್ರಗಳನ್ನು ಉಳಿಸಿಕೊಂಡು ಬಂದಿರುವ ದೇಶಗಳಲ್ಲಿ ಭಾರತ ಪ್ರಮುಖವಾಗಿದೆ. ಭಗವಂತ ಅವತಾರವೆತ್ತಿ ಧರ್ಮ ಸಂಸ್ಥಾಪನೆ ಮಾಡಿದ ಈ ಪುಣ್ಯ ಭೂಮಿಯಲ್ಲಿ ಅನೇಕ ದಾರ್ಶನಿಕರು, ಸಾಧು ಸಂತರು ಜನ್ಮತಾಳಿ ಪರಂಪರೆಯನ್ನು ಮುಂದುವರಿಸಿ ಇಂದಿಗೂ ಸಾಗಿ ಬಂದಿರುವುದು ಈ ದೇಶದ ಸುದೈವ.

ಇಲ್ಲಿ ಆಸ್ತಿಕ ಭಕ್ತರು ಜಾತಿ ಮತ ಧರ್ಮ ಪಂಗಡ ಭೇದವೆನ್ನದೆ ತಮ್ಮ ಇಷ್ಟ ದೇವರುಗಳನ್ನು ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸಿ ಮನಸ್ಸಿನ ಕ್ಲೇಶಗಳನ್ನು ಕಡಿಮೆ ಮಾಡಿ, ದೇವರಿಂದ ರಕ್ಷಣೆ ಹಾಗೂ ಅನುಗ್ರಹವನ್ನು ಅಪೇಕ್ಷಿಸುತ್ತಾರೆ .ಒಂದು ದೇವಸ್ಥಾನಕ್ಕೆ ಪ್ರವೇಶಿಸಿದರೆ ನಮ್ಮ ಐದು ಇಂದ್ರಿಯಗಳ ಮೇಲೆ ಅಪಾರ ಧನಾತ್ಮಕ ಶಕ್ತಿ ಪ್ರಭಾವ ಬೀರುತ್ತದೆ.ಅಪಾರವಾದ ಆತ್ಮಸ್ಥೈರ್ಯ, ಮನೋಬಲ, ಧನಾತ್ಮಕ ಚಿಂತನೆ, ಜೀವನದತ್ತ ಒಲವು ಮೂಡುತ್ತದೆ.ದೇಹಕ್ಕಿಂತ ದೇವಾಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟವರು ಭಾರತೀಯರು.


ಇದೀಗ ಇಡೀ ದೇಶವೇ ಕಾತರದಿಂದ ನಿರೀಕ್ಷಿಸುವ ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆಯಾಗುವ ಶುಭ ಸಂದರ್ಭದಲ್ಲಿ ರಾಮ ಭಕ್ತ ಹನುಮನಿಗೂ ಬರೋಬ್ಬರಿ 7.5ಕೋಟಿ ರೂಪಾಯಿ ವೆಚ್ಚದ ಭವ್ಯವಾದ ಶಿಲಾಮಯ ದೇಗುಲವೊಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿಪೇಟೆಯ ಹೃದಯಭಾಗ ವಿಜಯನಗರದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಆಸ್ತಿಕ ಭಕ್ತರ ಮನದಲ್ಲಿ ಸಂಭ್ರಮ ಮನೆ ಮಾಡಿದೆ.

ಸುಮಾರು 2.81 ಎಕರೆ ವಿಶಾಲ ಪ್ರದೇಶದಲ್ಲಿ ಶಿಲಾಮಯ ದೇವಸ್ಥಾನ, ತೀರ್ಥಮಂಟಪ, ತೀರ್ಥಬಾವಿ, ಸುತ್ತುಪೌಳಿ, ಪಾಕಶಾಲೆ, ಅರ್ಚಕರ ವಸತಿ ಗೃಹ , ಸಭಾಂಗಣ, ಗೋಶಾಲೆ ಹಾಗೂ ತಮಿಳುನಾಡು ಶೈಲಿಯ ರಾಜಗೋಪುರವು ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತರ ನೇತೃತ್ವದಲ್ಲಿ ಆಗಮೋಕ್ತ ಶಾಸ್ತ್ರದ ಪ್ರಕಾರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೆ ಸಿದ್ದಗೊಳ್ಳುತ್ತಿದೆ(ಜನವರಿ 21 ರಿಂದ 26 ರ ವರೆಗೆ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಸಂಭ್ರಮ)ದೇವಸ್ಥಾನಕ್ಕೆ 25 ಸೆಂಟ್ಸ್ ಜಾಗವನ್ನು ಖ್ಯಾತ ಮಾನಸಿಕ ತಜ್ಞ ಡಾ. ರವೀಶ್ ತುಂಗಾ ದಾನವಾಗಿ ನೀಡಿರುವುದು ಅವರ ಹೃದಯ ವೈಶಾಲ್ಯತೆಗೆ ಸಾಕ್ಷಿ.


 ಹಿನ್ನಲೆಯಿಂದ ಮುನ್ನಲೆಗೆ:

ಸುಮಾರು 40ವರ್ಷಗಳ ಹಿಂದೆ ಓಂ ಶ್ರೀ ವೀರಾಂಜನೇಯ ವ್ಯಾಯಮ ಶಾಲೆ ಎನ್ನುವ ಹೆಸರಿನಲ್ಲಿ ಮುಳಿ ಹುಲ್ಲಿನ ಕುಟೀರವೊಂದನ್ನು ನಿರ್ಮಿಸಿ ಪರಿಸರದ ಯುವಕರು ವಿರಾಮದ ಸಮಯದಲ್ಲಿ ವ್ಯಾಯಮ, ತಾಲೀಮು, ಕುಸ್ತಿ ಮೊದಲಾದ ಅಂಗ ಸಾಧನೆಗಾಗಿ ಸಂಜೆ ಒಟ್ಟು ಸೇರುತಿದ್ದರು.ಕಾಲ ಕ್ರಮವಾಗಿ

ಸಂಘಟನಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡ ಯುವಕರು ವ್ಯಾಯಾಮ ಶಾಲೆಯನ್ನು ಸುಸಜ್ಜಿತ ಕಟ್ಟಡವಾಗಿ ಮಾರ್ಪಡಿಸಿ ಶ್ರೀ ಆಂಜನೇಯ ಸ್ವಾಮಿಯ ಶಿಲಾಮೂರ್ತಿ ಪ್ರತಿಷ್ಠಾಪಿಸಿದರು

ನಿತ್ಯ ಪೂಜೆ, ಪುನಸ್ಕಾರಗಳಿಂದ ವ್ಯಾಯಮ ಶಾಲೆ ಆಸ್ತಿಕ ಭಕ್ತರ ಶ್ರದ್ಧಾ ಭಕ್ತಿಯ ಆರಾಧನಾ ಕೇಂದ್ರವಾಗಿ ಬೆಳೆಯುತ್ತ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳು ನಡೆಯುತ್ತಾ ಬಂತು. ಪ್ರತಿ ಶನಿವಾರ ಇಲ್ಲಿ ಬರುವ ಸಹಸ್ರಾರು ಭಕ್ತರೇ ಇದಕ್ಕೆ ಸಾಕ್ಷಿ.2018ರಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ಶ್ರೀ ಆಂಜನೇಯನಿಗೆ ದೇಗುಲ ನಿರ್ಮಿಸಬೇಕೆಂದು ಗೋಚರವಾಯಿತು.

ಈ ಪ್ರಕಾರ ತಕ್ಷಣವೇ ಕಾರ್ಯ ಪ್ರವೃತ್ತರಾದ ದೇವಸ್ಥಾನ ಆಡಳಿತ ಮಂಡಳಿಯು ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಶ್ರೀ ಆಂಜನೇಯ ದೇಗುಲ ನಿರ್ಮಾಣ ಸಮಿತಿ ರಚಿಸಿ ಅ ಮೂಲಕ ದೇವಸ್ಥಾನ ನಿರ್ಮಾಣದ ಕೆಲಸ ಪ್ರಾರಂಭಿಸಿಸುವ ಸಂದರ್ಭ ದೇಶಕ್ಕೆ ಕೊರೋನ ಸಮಸ್ಯೆ ಎದುರಾಗಿ ಸ್ವಲ್ಪ ಕಾಲ ಕೆಲಸ ಕಾರ್ಯ ಸ್ಥಗಿತಗೊಂಡು ವಿಳಂಬವಾಯಿತು. ಇದೆಲ್ಲಾ ದೈವೇಚ್ಛೆ ಎಂದು ಭಾವಿಸಿ ಇದೀಗ ಭವ್ಯ ಶಿಲಾಮಯ ದೇವಸ್ಥಾನದಲ್ಲಿ ಆಂಜನೇಯನ ಪ್ರತಿಷ್ಠೆಗೆ ಕ್ಷಣ ಗಣನೆ ಆರಂಭ ಆಗಿದೆ.

ಬ್ರಹ್ಮ ಕಲಶಕ್ಕೆ ಸಿದ್ಧತೆ:

ಇದೀಗ ದೇವಸ್ಥಾನ ನಿರ್ಮಾಣದ ಕೆಲಸ ಅಂತಿಮ ಹಂತ ತಲುಪಿ ಲೋಕಾರ್ಪಣೆಗೆ ದಿನ ನಿಗದಿಯಾಗಿದೆ. ಇದೇ ಜ .21ರಿಂದ 26ರವರೆಗೆ ಪ್ರತಿಷ್ಠಾಪನಾ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು ಅಯೋಧ್ಯೆಯಲ್ಲಿ ಶ್ರೀರಾಮ ವಿಗ್ರಹ ಪ್ರತಿಷ್ಠಾಪನಾ ಸಂದರ್ಭದಲ್ಲೇ ಫರಂಗಿಪೇಟೆಯಲ್ಲಿ ನೂತನ ಶಿಲಾಮಯ ಹನುಮನ ಮಂದಿರದ ಲೋಕಾರ್ಪಣೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ.ಈ ಪುಣ್ಯದ ಕಾರ್ಯವನ್ನು ಕಣ್ತುಂಬಿಕೊಳ್ಳಲು ಈ ಭಾಗದ 6 ಗ್ರಾಮಗಳ ಜನರ ಸಹಿತ ಆಸ್ತಿಕ ಭಕ್ತರು ಕಾತರದಿಂದ ಎದುರು ನೋಡುತಿದ್ದು, ಮನದಲ್ಲಿ ಸಂಭ್ರಮ ಹಾಗೂ ಸಡಗರ ಇಮ್ಮಡಿಯಾಗಿದೆ.

ಹೊಸ ದೇವಸ್ಥಾನ ನಿರ್ಮಾಣವು, ದೂರದೃಷ್ಟಿ ಹಾಗೂ ಸಾಮಜಮುಖಿ ಚಿಂತನೆಗೆ ಸಾಕ್ಷಿಯಾಗಲಿ, ಧಾರ್ಮಿಕ ಆದ್ಯಾತ್ಮಿಕ ಕಾರ್ಯಗಳೊಂದಿಗೆ ಸಂಘಟನಾತ್ಮಕವಾಗಿ ನಿರಂತರ ಧಾರ್ಮಿಕ ಶಿಕ್ಷಣ, ಸಾಹಿತ್ಯ, ಕಲಾ ಸೇವೆಗಳು ನಡೆಯಲಿ, ಸಮಾಜದ ಕಷ್ಟ ಕಾರ್ಪಣ್ಯಗಳು ದೂರವಾಗಿ ಸರ್ವರಿಗೂ ಸುಖ ಶಾಂತಿ ನೆಮ್ಮದಿ ಸಿಗಲಿ,ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ದೇಗುಲವು ನಾಂದಿಯಾಗಲಿ

Leave a Comment