Coastal Bulletin

ಮೂಡುಬಿದಿರೆ: ಶಿಕ್ಷಕರನ್ನು ಪಾಠವೊಂದನ್ನು ಬಿಟ್ಟು ಅನ್ಯ ಕೆಲಸಗಳಲ್ಲೇ ನಿರಂತರ ಸುತ್ತೋಲೆಗಳ ಮೂಲಕ ಗೋಳು ಹೊಯ್ದುಕೊಳ್ಳುವ ಇಲಾಖೆ, ಪ್ರಮೋಶನ್ ವಿಷಯದಲ್ಲೂ ಹಿಂದುಳಿದಿದೆ. ಅತಿಥಿ ಶಿಕ್ಷಕರಿಗೆ ನರೇಗಾ ಕೂಲಿ ಕಾಮಗಾರಿಗಿಂತಲೂ ಕಡಿಮೆ ಸಂಬಳ ನೀಡಿ ಅನ್ಯ ಸೌಲಭ್ಯಗಳನ್ನೂ ನೀಡದೇ ಸತಾಯಿಸುತ್ತಿದೆ. ರಾಜಕಾರಣಿಗಳಿಗೆ ಬೇಕಾಬಿಟ್ಟಿ ವೇತನ, ಮತ್ತೊಂದು ಹುದ್ದೆಯಲ್ಲಿರುವಾಗಲೂ ಮೊದಲಿನ ಸ್ಥಾನ ನಿರ್ವಹಣೆಗಾಗಿ ಪಿಂಚಣಿ ಹೀಗೆ ಲಾಭದಾಯಕ ವ್ಯವಸ್ಥೆಯಿದ್ದು ಶಿಕ್ಷಕರೇ ಮೊದಲಾದವರಿಗೆ ವೃತ್ತಿ ಜೀವನದಲ್ಲಿ ವೇತನ, ತಾರತಮ್ಯ ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

ಅವರು ರವಿವಾರ ಅಪರಾಹ್ನ ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ (ರಿ.) ವಿವಿಧ ವಿಷಯವಾರು  ಉಪನ್ಯಾಸಕರ ಸಂಘಗಳು, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘಗಳು ಮಂಗಳೂರು ಹಾಗೂ ಆಳ್ವಾಸ್ ಪದವಿಪೂರ್ವ  ಕಾಲೇಜು ಮೂಡುಬಿದಿರೆ ಇದರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಭವನದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಜರಗಿದ ದ.ಕ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸರ್ಕಾರಿ, ಅನುದಾನಿತ, ಅನುದಾನರಹಿತ ಶಿಕ್ಷಕರ ಕರ್ತವ್ಯ ದಕ್ಷತೆ ಒಂದೇ ಆಗಿದ್ದರೂ ಸರ್ಕಾರಿರೇತರ ಶಿಕ್ಷಕರು ಹಲವು ಸೌಲಭ್ಯಗಳಿಂದ ವಂಚಿತರು. ಮಹಿಳಾ ಸಮಾನತೆಯ ಬಗ್ಗೆ ಮಾತನಾಡುವ ಮಂದಿ ಅನುದಾನ ರಹಿತ ಶಿಕ್ಷಣ ಸಂಸ್ಥೆಯ ಶಿಕ್ಷಕಿ, ರಜೆ, ಹೆರಿಗೆ ರಜೆ ಇತ್ಯಾದಿ ಅಗತ್ಯ ಸೌಲಭ್ಯಗಳೂ ಇಲ್ಲದೇ ಪರಿತಪಿಸುತ್ತಿರುವುದು ಶೋಚನೀಯ. ಹೊಸ ಶಿಕ್ಷಣ ನೀತಿಯ ಅನುಷ್ಠಾನಕ್ಕೂ ಮೊದಲು ಈ ತಾರತಮ್ಯ, ಅವ್ಯವಸ್ಥೆಗಳನ್ನು ಮೊದಲು ಸರಿಪಡಿಸುವ ಬಗ್ಗೆ ಚಿಂತನೆ ನಡೆಸಬೇಕು. ಫಲಾಪೇಕ್ಷೆಯಿಲ್ಲದ ಪ್ರಾಮಾಣಿಕ ಕರ್ತವ್ಯ ನಿರ್ವಹಣೆ ನಮ್ಮದಾಗಬೇಕು ಎಂದವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ ನೈತಿಕ ಮೌಲ್ಯ, ಆದರ್ಶಗಳಿಂದ ಕೂಡಿದ ಶಿಕ್ಷಣ ಇಂದು ಮರೆಯಾಗುತ್ತಿದೆ. ಇದು ಕೌಟುಂಬಿಕ, ಸಾಮಾಜಿಕ ಬಾಂಧವ್ಯಗಳ ಕುಸಿತಕ್ಕೂ ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಶಿಕ್ಷಣ ರಂಗದಲ್ಲಿ ಖಾಸಗಿ ಸಂಸ್ಥೆಗಳ ಕೊಡುಗೆ ಗಮನಾರ್ಹವಾದದ್ದು. ಹಲವು ಆಯಾಮಗಳ ಸವಾಲುಗಳ ನಡುವೆ ಶಿಕ್ಷಣ ವ್ಯವಸ್ಥೆಯನ್ನು ಮುನ್ನಡೆಸಿಕೊಂಡು ಹೋಗಬೇಕಾದ ಇಂದಿನ ಪರಿಸ್ಥಿತಿಯಲ್ಲಿ ಖಾಸಗಿ ವಲಯದಲ್ಲೇ ಗುಣಮಟ್ಟ, ಮೌಲ್ಯಗಳನ್ನು ಕಡೆಗಣಿಸಿ ಶಿಕ್ಷಣದ ಅಪ್ಪಟ ವ್ಯಾಪಾರೀಕರಣ ಬೆಳೆಯುತ್ತಿರುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಸರಕಾರಿ ಶಿಕ್ಷಣ ಸಂಸ್ಥೆಗಳು ಸೋತರೆ ಅದು ನಮ್ಮ ಸಂಸ್ಕೃತಿ, ಶ್ರೀ ಸಾಮಾನ್ಯನ ಸೋಲು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ: ದ.ಕ ಜಿಲ್ಲಾ ಮಟ್ಟದಲ್ಲಿ ಸರಕಾರಿ, ಅನುದಾನಿತ ಪ.ಪೂ ಕಾಲೇಜುಗಳ ಜತೆಗೆ

ಅನುದಾನರಹಿತ ಪ.ಪೂ.ಕಾಲೇಜುಗಳ ಬೋಧಕರನ್ನೂ ಮೊದಲ ಬಾರಿಗೆ ಪರಿಗಣಿಸಿ ಡಾ.ಯದುಪತಿ ಗೌಡ ( ವಾಣಿ ಪ.ಪೂ.ಕಾಲೇಜು ಬೆಳ್ತಂಗಡಿ), ಡಾ.ಪ್ರದೀಪ್ ಕುಮಾರ್ ಎಂ ( ಸೈಂಟ್ ಅಲೋಶಿಯಸ್ ಪ.ಪೂ.ಕಾಲೇಜು ಮಂಗಳೂರು), ಹರೀಶ ಶಾಸ್ತ್ರಿ ( ವಿವೇಕಾನಂದ ಪ.ಪೂ.ಕಾಲೇಜು ಪುತ್ತೂರು), ಸಚೇತ್ ಸುವರ್ಣ ( ಸರಕಾರಿ ಪ.ಪೂ.ಕಾಲೇಜು ಮಂಗಳೂರು), ಸಂಧ್ಯಾ ಪಿ. ಶೆಟ್ಟಿ ( ಮರ್ಕಝಲ್  ಹುದಾ ಮಹಿಳಾ ಪ.ಪೂ ಕಾಲೇಜು) ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು.

ಸರಕಾರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಾರ್ಗದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ನಿವೃತ್ತ ಶಿಕ್ಷಕ ನಾರಾಯಣ ನಾಯ್ಕ ಸಿದ್ಧಕಟ್ಟೆ ಅವರನ್ನೂ ಗೌರವಿಸಲಾಯಿತು. ಸಭಾಧ್ಯಕ್ಷ ಡಾ. ಎಂ. ಮೋಹನ ಆಳ್ವ, ಮುಖ್ಯ ಅತಿಥಿಗಳಾದ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್.ಎನ್., ರಾಜ್ಯ ಪ.ಪೂ. ಶೈಕ್ಷಣಿಕ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ ಪಿ ಅವರನ್ನು ವಿಶೇಷವಾಗಿ ಸಮ್ಮಾನಿಸಲಾಯಿತು.

ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್.ಎನ್., ದ.ಕ ಜಿಲ್ಲಾ ಪ.ಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಡಿ. ಜಯಣ್ಣ,  ಶಾಖಾಧಿಕಾರಿ ನಿತಿನ್ ಬಿ.ಟಿ, ರಾಜ್ಯ ಪ.ಪೂ. ಶೈಕ್ಷಣಿಕ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ ಪಿ,  ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಉಪಾಧ್ಯಕ್ಷ ಸುಧೀರ್ ಕುಮಾರ್, ವಿನಾಯಕ ಬಿ.ಜಿ., ವಿಠಲ ಎ, ಜತೆ ಕಾರ್ಯದರ್ಶಿಗಳಾದ ಪ್ರವೀಣ್ ಎ, ಮಹಮ್ಮದ್ ಇಸಾಕ್  ಕೋಶಾಧಿಕಾರಿ ಕವಿತಾ,  ಅತಿಥೇಯ ಆಳ್ವಾಸ್ ಪ.ಪೂ.ಕಾಲೇಜಿನ ಪ್ರಾಚಾರ್ಯ ಮಹಮ್ಮದ್ ಸದಾಕತ್  ಉಪಸ್ಥಿತರಿದ್ದರು.

ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಎನ್. ಗಂಗಾಧರ ಆಳ್ವ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಯೂಸುಫ್ ವಿಟ್ಲ ವಂದಿಸಿದರು. ಆಳ್ವಾಸ್ನ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ಸಾಂಸ್ಕೃತಿಕ ತಂಡದಿಂದ ಮಲ್ಲಕಂಬ, ನೃತ್ಯ, ಯಕ್ಷಗಾನ ಬಯಲಾಟ, ಪ.ಪೂ ಶಿಕ್ಷಕರಿಂದ ರಸಮಂಜರಿ ಕಾರ್ಯಕ್ರಮಗಳೂ ಜರಗಿದವು.

Leave a Comment