Coastal Bulletin

ಬಂಟ್ವಾಳ: ಬಂಟ್ವಾಳದಲ್ಲಿ ಬಿಜೆಪಿ ಕಾರ್ಯಕರ್ತರ ಉತ್ಸಾಹವನ್ನು ನೋಡಿದಾಗ ೨೦ ಸಾವಿರಕ್ಕೂ ಅಧಿಕ ಮತಗಳಿಂದ ಶಾಸಕ ರಾಜೇಶ್ ನಾಯ್ಕ್ ಅವರು ಮತ್ತೆ ಗೆಲ್ಲುವ ವಿಶ್ವಾಸ ಬರುತ್ತಿದ್ದು, ಅವರು ರಾಜ್ಯದ ಎಲ್ಲಾ ಇಲಾಖೆಗಳ ಅನುದಾನವನ್ನು ಬಂಟ್ವಾಳಕ್ಕೆ ತಂದು ಹಳ್ಳಿ ಹಳ್ಳಿಗಳ ರಸ್ತೆಯನ್ನು ಅಭಿವೃದ್ಧಿ ಮಾಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಅವರು ರಾಜ್ಯ ಬಿಜೆಪಿಯು ೨೨೪ ವಿಧಾನಸಭಾ ಕ್ಷೇತ್ರಗಳಲ್ಲೂ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಯು ಬಂಟ್ವಾಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಪುಂಜಾಲಕಟ್ಟೆಯಿಂದ ಬಂಟ್ವಾಳದವರೆಗೆ ಬೃಹತ್ ವಾಹನ ಜಾಥಾ ಹಾಗೂ ಬಂಟ್ವಾಳ ಶ್ರೀ ಹನುಮಾನ್ ದೇವಸ್ಥಾನದ ಬಳಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ನಡೆದ ರೋಡ್ ಶೋ ಬಳಿಕ ಮಾತನಾಡಿದರು.

ದ.ಕ.ಜಿಲ್ಲೆಯು ಅಭಿವೃದ್ಧಿಯ ಮಾತ್ರ ಅಲ್ಲ, ರಾಷ್ಟ್ರೀಯತೆಯನ್ನು ಜಾಗೃತಿ ಮಾಡಿದ ಜಿಲ್ಲೆಯಾಗಿದೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂಬ ಸಂಕಲ್ಪ ಕಾರ್ಯಕರ್ತರಲ್ಲಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆಯಲಿದ್ದು, ರಾಷ್ಟ್ರೀಯತೆ, ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ, ಅಭಿವೃದ್ಧಿಯ ಆಧಾರದಲ್ಲಿ ಚುನಾವಣೆ ನಡೆಯಲಿದೆ ಎಂದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಬಂಟ್ವಾಳದಲ್ಲಿ ಬಿಜೆಪಿ ಮತ್ತಷ್ಟು ಗಟ್ಟಿಯಾಗಿ ನೆಲೆ ನಿಲ್ಲುವ ರೀತಿಯಲ್ಲಿ ಅಭಿವೃದ್ಧಿ ಜತೆಗೆ

ಪಕ್ಷ ಸಂಘಟನೆ ಮಾಡಿದ್ದೇವೆ. ೫ ವರ್ಷಗಳಲ್ಲಿ ೨ ಸಾವಿರ ಕೋ.ರೂ.ಗಳ ಅನುದಾನ ಬಂಟ್ವಾಳಕ್ಕೆ ಬಂದಿದ್ದು, ೧೫೦೦ಕ್ಕೂ ಅಧಿಕ ರಸ್ತೆಗಳು ನಿರ್ಮಾಣವಾಗಿದೆ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದು ಇನ್ನಷ್ಟು ಕೆಲಸಗಳನ್ನು ಅನುಷ್ಠಾನ ಮಾಡಲಾಗುವುದು ಎಂದರು.

ಯಾತ್ರೆಯಲ್ಲಿ ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ಕುಮಾರ್, ಯಾತ್ರೆಯ ಸಹಸಂಚಾಲಕ ದತ್ತಾತ್ರೇಯ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಕ್ಷೇತ್ರ ಪ್ರಭಾರಿ ಕೊರಗಪ್ಪ ನಾಯ್ಕ್, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಸುಧೀರ್ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಉಪಸ್ಥಿತರಿದ್ದರು.

Leave a Comment