ಬಂಟ್ವಾಳ: ಫರಂಗಿಪೇಟೆ ಸೇವಾಂಜಲಿ ಸಭಾಭವನದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದ.ಕ.ಜಿಲ್ಲಾ ಶಾಖೆ ಹಾಗೂ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ದೇರಳಕಟ್ಟೆ ಜ| ಕೆ.ಎಸ್.ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಕ್ಯಾನ್ಸರ್ ತಪಾಸಣಾ ಮತ್ತು ಮಾಹಿತಿ ಶಿಬಿರವನ್ನು ಶನಿವಾರ ದೇರಳಕಟ್ಟೆ ಜ| ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಶಿವಕುಮಾರ್ ಹಿರೇಮಠ್ ಉದ್ಘಾಟಿಸಿದರು.
ಕ್ಯಾನ್ಸರ್ ತಡೆಗಟ್ಟಬಹುದಾದ ರೋಗವಾಗಿದ್ದು ಆರೋಗ್ಯ ಶಿಬಿರದ ಮೂಲಕ ಜನರಲ್ಲಿ ಅರಿವು ಮೂಡಿಸಿ ರೋಗ ತಡೆಗಟ್ಟಲು ಸಾಧ್ಯವಿದೆ, ಅನುವಂಶೀಯತೆ ಒಂದು ಕಾರಣವಾದರೂ ನಮ್ಮ ಜೀವನ ಶೈಲಿ, ಆಹಾರ ಪದ್ದತಿಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಕಾಲಕಾಲಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ, ಸ್ಕ್ರೀನಿಂಗ್ ಮೂಲಕ ರೋಗ ಪತ್ತೆ ಮಾಡಿ ರೋಗ ಬಾರದಂತೆ ತಡೆಯಬಹುದಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕ್ಯಾನ್ಸರ್ ತಜ್ಞರಾದ ಡಾ| ಜಯರಾಮ ಶೆಟ್ಟಿ ಮಾತನಾಡಿ ಸ್ವಯಂ ವೈದ್ಯರಾಗಿ ಚಿಕಿತ್ಸೆ ಮಾಡಿಕೊಳ್ಳುವ ಬದಲು ಕ್ಯಾನ್ಸರ್ ಎನ್ನುವ ಸಂಶಯ ಇದ್ದಾಗ ವೈದ್ಯರ ಬಳಿ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳವುದು ಉತ್ತಮ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಶಾಂತಾರಾಮ್ ಶೆಟ್ಟಿ ಮಾತನಾಡಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರಿಂದ ಕ್ಯಾನ್ಸರ್ ರೋಗದಿಂದ ದೂರ ಇರಲು ಸಾಧ್ಯವಿದೆ
ಎಂದು ತಿಳಿಸಿದರು.
ಕ್ಯಾನ್ಸರ್ ತಜ್ಞೆ ಡಾ| ಸ್ಮಿತಾ ರಾವ್, ಸ್ತ್ರೀ ರೋಗ ತಜ್ಞೆ ಡಾ| ಕ್ಷಿಪ್ರ, ಇಎನ್‌ಟಿ ವೈದ್ಯ ಡಾ| ವಾದೀಶ್ ಭಟ್, ಯುವ ರೆಡ್‌ಕ್ರಾಸ್ ನಿರ್ದೇಶಕ ಸಚೇತ್ ಸುವರ್ಣ ಅವರು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಜಿ.ಪಂ.ಮಾಜಿ ಸದಸ್ಯ ರವೀಂದ್ರ ಕಂಬಳಿ, ದಂತ ವೈದ್ಯ ಡಾ| ಅನೀಶ್, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ರೆಡ್‌ಕ್ರಾಸ್ ಸಂಯೋಜಕಿ ಲತಾ ಎಸ್., ವೈದ್ಯೆ ಡಾ| ಹರ್ಷಿತಾ ಪೂಂಜ, ಸೇವಾಂಜಲಿ ಟ್ರಸ್ಟಿಗಳಾದ ಕಂಪ ಸದಾನಂದ ಆಳ್ವ, ಕೊಡ್ಮಾಣ್ ದೇವದಾಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ ಕಾರ್ಯಕ್ರಮ ನಿರ್ವಹಿಸಿದರು. ಪ್ರಕಾಶ್ ಕಿದೆಬೆಟ್ಟು, ಪ್ರಕಾಶ್ ಶೆಟ್ಟಿ ಶ್ರೀ ಶೈಲ, ಎಂ.ಕೆ. ಖಾದರ್ ಮಾರಿಪಳ್ಳ, ವೃಂದಾ ಪೂಜಾರಿ, ಪದನಾಭ ಶೆಟ್ಟಿ ಪುಂಚಮೆ, ಸುರೇಶ್ ರೈ ಪೆಲಪಾಡಿ, , ಪ್ರಶಾಂತ್ ತುಂಬೆ, ಮಧುರಾಜ್ ಶೆಟ್ಟಿ ಸುಜೀರು ಉಪಸ್ಥಿತರಿದ್ದರು.















