ಬಂಟ್ವಾಳ:ಇಲ್ಲಿನ ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ ನಡುವಿನ ಕಾವಳಪಡೂರು ಗ್ರಾಮದ ಮೇನಾಡು ಎಂಬಲ್ಲಿ ಮನೆಯೊಂದಕ್ಕೆ ನಾಲ್ವರು ಅಪರಿಚಿತ ತಂಡ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಗುರುವಾರ ಮುಂಜಾನೆ ನಡೆದಿದೆ.
ಇಲ್ಲಿನ ಸಾಲುಮರ ತಿಮ್ಮಕ್ಕ ಉದ್ಯಾನಬಳಿ ನಿವಾಸಿ ಮೆರಿಟಾ ಸಿಂಥಿಯಾ ಪಿಂಟೋ ಎಂಬವರ ಮನೆಗೆ ಗುರುವಾರ ಮುಂಜಾನೆ 4 ಗಂಟೆಗೆ ಕಾಲಿಂಗ್ ಬೆಲ್ ಒತ್ತಿ ನಾಲ್ವರು ಅಪರಿಚಿತರ ತಂಡ ಮನೆಯೊಳಗೆ ನುಗ್ಗಿದ್ದಾರೆ. ಬಾಗಿಲು ತೆರೆದ ಮೆರಿಟಾ ಮತ್ತು ಇವರ ವಯೋವೃದ್ಧ ತಾಯಿಗೆ ಚಾಕು ತೋರಿಸಿ ಬೆದರಿಸಿ ಕಪಾಟಿನಲ್ಲಿದ್ದ ರೂ 3.20ಲಕ್ಷ ಮೌಲ್ಯದ 82
ಗ್ರಾಂ ಚಿನ್ನಾಭರಣ ಸಹಿತ ರೂ 11 ಸಾವಿರ ಮೌಲ್ಯದ ಎರಡು ಮೊಬೈಲ್ ಮತ್ತು ರೂ 30ಸಾವಿರ ಮೊತ್ತದ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ರಿಷ್ವಂತ್ ಸಹಿತ ಬಂಟ್ವಾಳ ಡಿವೈಎಸ್ಪಿ ವಿಜಯಪ್ರಸಾದ್ ಮತ್ತಿತರರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














