ಸಜಿಪಮೂಡ :ಸರ್ಕಾರಿ ಪ್ರೌಢಶಾಲೆಯ ಒಂದೇ ತರಗತಿಯಲ್ಲಿ ಐದು ಜೋಡಿ ಅವಳಿ-ಜವಳಿ ಹೆಣ್ಮಕ್ಕಳು

Coastal Bulletin
ಸಜಿಪಮೂಡ :ಸರ್ಕಾರಿ ಪ್ರೌಢಶಾಲೆಯ ಒಂದೇ ತರಗತಿಯಲ್ಲಿ ಐದು ಜೋಡಿ ಅವಳಿ-ಜವಳಿ ಹೆಣ್ಮಕ್ಕಳು

ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಐದು ಜೋಡಿ ಅವಳಿ-ಜವಳಿ ಹೆಣ್ಮಕ್ಕಳು ಒಂದೇ ತರಗತಿಯಲ್ಲಿ ಕಲಿಯುತ್ತಿರುವ ಮೂಲಕ ಗಮನ ಸೆಳೆದಿದ್ದಾರೆ.

ಈ ಶಾಲೆಯ ಎಂಟನೇ ತರಗತಿಯಲ್ಲಿ ಐದು ಜೋಡಿ ಅವಳಿ-ಜವಳಿ ಹೆಣ್ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಇವರೆಲ್ಲರೂ ಪ್ರತ್ಯೇಕ 5 ಕುಟುಂಬಕ್ಕೆ ಸೇರಿದವರು. ಆದರೆ ಬಹುತೇಕ ಎಲ್ಲರೂ ಒಂದೇ ತರಹ ಕಾಣಿಸುತ್ತಿದ್ದು, ಇವರನ್ನು ಕೆಲವೊಮ್ಮೆ ಗುರುತಿಸಲು ಇಲ್ಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೂ ಗೊಂದಲ ಉಂಟು ಮಾಡುತ್ತಿದೆ ಎನ್ನುತ್ತಿದ್ದಾರೆ.

ಇಲ್ಲಿನ ನಿವಾಸಿ ಅಯಿಷಾ ಝಿಬಾ-ಖತೀಝಾ ಝಿಯಾ, ಶ್ರಣವಿ-ಜಾನ್ಹವಿ, ಫಾತಿಮತ್ ಕಮಿಲ-ಫಾತಿಮತ್ ಸಮಿಲ, ಆಯಿಷಾ ರೈಫಾ- ಫಾತೀಮಾ ರೌಲ, ದುಲೈಕತ್ ರುಫಿದಾ- ಹಲೀಮತ್ ರಾಫಿದ ಒಂದೇ ತರಗತಿಯಲ್ಲಿ ಕಲಿಯುತ್ತಿರುವ ಅವಳಿ- ಜವಳಿ ವಿದ್ಯಾರ್ಥಿನಿಯರು. ಇವರೆಲ್ಲರೂ ಒಂದೇ ಶಾಲೆಯ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವುದು ಅಚ್ಚರಿಯ ಸಂಗತಿಯಾಗಿದ್ದು, ಈ ಹಿಂದೆ ಇದೇ ಪ್ರೌಢಶಾಲೆಯಲ್ಲಿ ಎಂಟು ಜೋಡಿ

ಅವಳಿ-ಜವಳಿ ವಿದ್ಯಾರ್ಥಿ ಗಳು ಬೇರೆ ಬೇರೆ ತರಗತಿಯಲ್ಲಿ ಇದ್ದು ಗಮನ ಸೆಳೆದಿದ್ದರು.

ತಾಲ್ಲೂಕಿನಲ್ಲಿ ಅತ್ಯಧಿಕ ವಿದ್ಯಾರ್ಥಿಗಳನ್ನು ಹೊಂದಿರುವ ಎರಡನೇ ಸರ್ಕಾರಿ ಪ್ರೌಢಶಾಲೆಯಾಗಿ ಗುರುತಿಸಿಕೊಂಡ ಈ ಶಾಲೆ ಶೈಕ್ಷಣಿಕವಾಗಿಯೂ ಮುಂದಿದೆ. ಪ್ರಸಕ್ತ ಶಿಕ್ಷಕರ ತಂಡ, ಹಿರಿಯ ವಿದ್ಯಾರ್ಥಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿ ಸೇರಿದಂತೆ ಸ್ಥಳೀಯ ಜೆಸಿಐ ಮತ್ತು ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಶಾಲೆಗೆ ಹೆಚ್ಚಿನ ನೆರವು ಸಿಗುತ್ತಿದೆ. ಈ ಶಾಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕಳೆದ ವರ್ಷ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೊಬ್ಬರು ಒಟ್ಟು 625ರಲ್ಲಿ 614 ಅಂಕ ಗಳಿಸಿ ಗಮನ ಸೆಳೆದಿದ್ದು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯೂ ಇಲ್ಲಿಗೆ ದೊರೆತಿದೆ ಎಂದು ಮುಖ್ಯಶಿಕ್ಷಕಿ ಆಲಿಸ್ ಪಾಯಿಸ್ ಪ್ರತಿಕ್ರಿಯಿಸಿದ್ದಾರೆ.

Leave a Comment