ಮಂಚಿ ಕೊಳ್ನಾಡು: ಪ್ರೌಢಶಾಲೆಯಲ್ಲಿ ಶೌಚಾಲಯ, ತರಗತಿ ಕೊಠಡಿಗಳ ಹಸ್ತಾಂತರ. ವಿಜ್ಞಾನ ವಸ್ತು ಪ್ರದರ್ಶನ ಮತ್ತು ರಂಗೋತ್ಸವ ಕಾರ್ಯಕ್ರಮ

Coastal Bulletin
ಮಂಚಿ ಕೊಳ್ನಾಡು: ಪ್ರೌಢಶಾಲೆಯಲ್ಲಿ ಶೌಚಾಲಯ, ತರಗತಿ ಕೊಠಡಿಗಳ ಹಸ್ತಾಂತರ. ವಿಜ್ಞಾನ ವಸ್ತು ಪ್ರದರ್ಶನ ಮತ್ತು ರಂಗೋತ್ಸವ ಕಾರ್ಯಕ್ರಮ

ಬಂಟ್ವಾಳ :ಮಂಚಿ-ಕೊಳ್ಳಾಡು ಸರಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ 2024-25 ನೇ ಸಾಲಿನ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ರಂಗೋತ್ಸವ ಕಾರ್ಯಕ್ರಮವು ಮಾ 8ರಂದು ಶನಿವಾರ ನಡೆಯಿತು.

ಈ ಸಂದರ್ಭದಲ್ಲಿ ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ಆರ್ ನಿಧಿಯಿಂದ ನಿರ್ಮಾಣವಾದ ಸುಸಜ್ಜಿತ ಶೌಚಾಲಯ ಮತ್ತು ಎನ್.ಎಂ.ಪಿ.ಎ ಸಂಸ್ಥೆಯ ಸಿ.ಎಸ್.ಆರ್ ನಿಧಿಯಿಂದ ನಿರ್ಮಾಣವಾದ ಶೌಚಾಲಯ, ತರಗತಿ ಕೊಠಡಿ ಹಸ್ತಾಂತರ ಕಾರ್ಯಕ್ರಮವನ್ನು ಜರುಗಿತು.

ಮಂಚಿ ಕೊಳ್ನಾಡು ಪ್ರೌಢಶಾಲೆಯ ಭೌತಿಕ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಿರುವ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ ಎಸ್ ಗಟ್ಟಿ ಕಟ್ಟಡಗಳ ಹಸ್ತಾಂತರ ಕಾರ್ಯಕ್ರಮ ನೆರವೇರಿಸಿ ಅತಿಥಿ ಸ್ಥಾನದಿಂದ, "ಸರಕಾರಿ ಶಾಲೆಗಳು ಈ ದೇಶದ ಉಸಿರಾಗಿದ್ದು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ತನ್ನ ಶಿಕ್ಷಣದ ಮೇರು ಹಂತವನ್ನು ತಲುಪಲು ಸಾಧ್ಯವಾಗಿದೆ. ಸರಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಿಗೆ ಕೊರತೆಯಾಗದಂತೆ ಕಾಳಜಿ ವಹಿಸಿದರೆ ಪ್ರತಿಯೊಂದು ಸರಕಾರಿ ಶಾಲೆಯು ಕೂಡ ಗಮನಾರ್ಹ ಪ್ರಗತಿ ಸಾಧಿಸಬಹುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆ, ಕ್ರೀಡೆ ಹಾಗೂ ಕಲೆ ಸಾಂಸ್ಕೃತಿಕ ಪ್ರತಿಭಾ ವಿಕಸನಕ್ಕೆ ಈ ಶಾಲೆ ಮಾದರಿಯಾಗಿದೆ." ಎಂದರು.

ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಮಂಜುನಾಥ್ ಎಂ.ಜಿ. ಮಾತನಾಡಿ, "ವಿಜ್ಞಾನ ವಸ್ತು ಪ್ರದರ್ಶನ, ರಂಗೋತ್ಸವ ಕಾರ್ಯಕ್ರಮಗಳು ಈ ಶೈಕ್ಷಣಿಕ ಸಾಲಿನ ಇಲಾಖೆಯ ಕಾರ್ಯಕ್ರಮವಾಗಿ ಮೂಡಿಬಂದಿದ್ದು, ವಿದ್ಯಾರ್ಥಿಗಳ ಸೃಜನಶೀಲ ಅಭಿವ್ಯಕ್ತಿಗೆ ವಿಶೇಷ ಪ್ರೋತ್ಸಾಹ ನೀಡಿದೆ. ಶಾಲೆಯಲ್ಲಿ ಎಲೆಮರೆಯ ಕಾಯಂತಿರುವ ಪ್ರತಿಭೆಗಳು ಗುರುತಿಸಿ ಹೊರಬರಲು ಈ ರೀತಿಯ ವಿಶೇಷ ಕಾರ್ಯಕ್ರಮಗಳು ಪೂರಕವಾಗಿದೆ." ಎಂದರು.

ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿಗಳಾದ ಮಾಧವ ಮಾವೆ ಮಾತನಾಡಿ, "ಬಾಲ್ಯದ ಶಾಲಾ ದಿನಗಳು ಅದ್ಭುತ ಅನುಭವಗಳು. ತನ್ನ ವ್ಯಕ್ತಿತ್ವದ ನಿರ್ಮಾಣಕ್ಕೆ ಶಾಲೆ, ತನ್ನ ವಿಶೇಷವಾದ ಕೊಡುಗೆಯನ್ನು ನೀಡುತ್ತದೆ. ಶಿಕ್ಷಕರ ಮಾರ್ಗದರ್ಶನ ಹಾಗೂ ಸಹಪಾಠಿಗಳ ಪ್ರಭಾವದಿಂದ ಗುರಿಯ ಸಾಧನೆಯತ್ತ ಮುಖ ಮಾಡುವುದು ತನ್ನ ಬಾಳಿನ

ಯಶಸ್ಸಿಗೆ ಮುಖ್ಯ ಕಾರಣವಾಗುತ್ತದೆ." ಎಂದರು.

ರಂಗೋತ್ಸವ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ ನಾಟ್ಯ ಪ್ರದರ್ಶನ ಪ್ರದರ್ಶನಗೊಂಡು, ಶಾಲೆಯ ಎಲ್ಲಾ ವಿದ್ಯಾರ್ಥಿಗಳು ರಚಿಸಿರುವ ಕೊಲಾಜ್ ಚಿತ್ರಗಳು, ಮುಖವಾಡದ ರಚನೆಗಳು, ಹಾಗೂ ಇನ್ನಿತರ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ ನೀಡಿದ, ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿಗಳಾದ ಲಯನ್ ಚಂದ್ರಹಾಸ ರೈ ಬಾಲಾಜಿ ಬೈಲು ಶುಭಾಶಯ ಕೋರಿದರು. ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶ್ರಫ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ತನ್ನ ಆಶಯದ ನುಡಿಗಳನ್ನಿತ್ತರು. 

ಶೈಕ್ಷಣಿಕ ಸಾಲಿನಲ್ಲಿ ಪಠ್ಯ ವಿಷಯದಲ್ಲಿ ವಿಶೇಷ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಅತಿಥಿಗಳಾಗಿ ಆಗಮಿಸಿದ ರಾಜೀವ ಗಾಂಧಿ ಪಂಚಾಯತ್‌ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಸುಭಾಷ್ ಚಂದ್ರ ಶೆಟ್ಟಿ ಕುಳಾಲು ದತ್ತಿನಿಧಿಯನ್ನು ವಿತರಣೆ ಮಾಡಿ, "ಕೊಳ್ನಾಡು ಗ್ರಾಮದ ಮಂಚಿ ಪ್ರೌಢಶಾಲೆಯು ಬಂಟ್ವಾಳ ತಾಲೂಕಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಪ್ರೌಢಶಾಲೆಗಳ ಲ್ಲೊಂದಾಗಿದೆ. ಕಲಿಕೆಯಲ್ಲಿ ಆಸಕ್ತಿ ತೋರಿಸುವ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ಸಹಾಯ ನೀಡುವ ಮೂಲಕ ಉನ್ನತ ವ್ಯಾಸಂಗಕ್ಕೆ ಪ್ರೇರಣೆ ನೀಡಬೇಕಾಗಿದೆ. ಯಾವುದೇ ಒತ್ತಡಗಳಿಲ್ಲದೆ ನಿರಾತಂಕವಾಗಿ ಕಾರ್ಯನಿರ್ವಹಿಸುವ ವಾತಾವರಣವು ಆ ಶಾಲೆಯಲ್ಲಿ ವಿಶಿಷ್ಟ ಅಭಿವೃದ್ಧಿಯನ್ನು ಕಾಣಲು ಸಾಧ್ಯ ಎಂದರು.

ಕೃಷಿಕರು ಮತ್ತು ಶಾಲಾ ಹಿತೈಷಿಗಳು ವಿಶ್ವನಾಥ ನಾಯ್ಕ ನಿರ್ಬೈಲು, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಶ್ರೀಮತಿ ಸವಿತಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಿಕ್ಷಕಿ ಶ್ರೀಮತಿ ಶಾಂತಾ ಎಸ್ ದತ್ತಿನಿಧಿ ಪಡೆದ ವಿದ್ಯಾರ್ಥಿಗಳ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರಾದ ಜಗನ್ನಾಥ ಪುರುಷ ಸ್ವಾಗತಿಸಿದರು. ಮುಖ್ಯ ಶಿಕ್ಷಕರಾದ ಶ್ರೀಮತಿ ಸುಶೀಲಾ ವಿಟ್ಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಭಾಷಾ ಶಿಕ್ಷಕರಾದ ಶಿವಕುಮಾರ್ ಎಂ. ಜಿ. ಸ್ವಾಗತಿಸಿದರು. ಗಣಿತ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಡಬ್ಲ್ಯೂ. ಎಂ. ಕಾರ್ಯಕ್ರಮ ನಿರ್ವಹಿಸಿದರು.

Leave a Comment