ಬಂಟ್ವಾಳ: ಭಾಷೆ ಹಾಗೂ ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಭಾಷೆ ಅಳಿದರೆ ಸಂಸ್ಕೃತಿಯು ಅಳಿಯುತ್ತದೆ. ತುಳುನಾಡಿನ ಭೂತಾರಾಧನೆ, ನಾಗಾರಾಧನೆ, ಯಕ್ಷರಾಧನೆಯಂತಹ ಆರಾಧನಾ ಪದ್ದತಿಯೂ ನಾಶವಾಗುತ್ತದೆ. ತುಳು ಭಾಷೆ ಅವನತಿಯ ಆತಂಕ ಎದುರಾಗಿದ್ದ ಕಾಲಘಟ್ಟದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆದ ವಿಶ್ವ ತುಳು ಸಮ್ಮೇಳನ ತುಳು ಭಾಷೆ ಹಾಗೂ ಸಂಸ್ಕೃತಿಯ ಉಳಿವಿಗೆ ವಿಶೇಷ ಕೊಡುಗೆಯನ್ನು ನೀಡಿದೆ. ಆ ಬಳಿಕ ತುಳುನಾಡು ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ತುಳು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ ಎಂದು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಅಶೋಕ್ ಶೆಟ್ಟಿ ಸರಪಾಡಿ ಹೇಳಿದರು.
ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಇದರ ಬಂಟ್ವಾಳ ವಲಯದ ಆಶ್ರಯದಲ್ಲಿ ಬಂಟ್ವಾಳ ಬೈಪಾಸ್‌ನಲ್ಲಿರುವ ಭಂಡಾರಿ ಸಭಾಭವನದಲ್ಲಿ ನಡೆದ ಪ್ರಥಮ ವಷದ ಆಟಿದ ನೆಂಪು ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಆಟಿದ ನೆಂಪು ಕಾರ್ಯಕ್ರಮಗಳ ಮೂಲಕ ತುಳುನಾಡಿನ ಬದುಕಿನ ಸಿಂಹಾವಲೋಕನ ಮಾಡಿಕೊಳ್ಳುತ್ತಿದ್ದೇವೆ. ಔಷಧಿ ಗುಣ ಹೊಂದಿದ್ದ ಸೊಪ್ಪು, ತರಕಾರಿಗಳ ಸೇವನೆಯಿಂದ ನಮ್ಮ ಹಿರಿಯರು ಆರೋಗ್ಯವಂತರಾಗಿದ್ದರು. ಈಗ ಅದೆಲ್ಲವನ್ನು ಮರೆತ ಪರಿಣಾಮ ರೋಗಗಳು ನಮ್ಮನ್ನು ಆವರಿಸಿಕೊಂಡಿದೆ ಎಂದ ಅವರು ದೇವರ ಮೇಲೆ ನೈಜ ಭಕ್ತಿ ಇದ್ದಾಗ ಎಂದಿಗೂ ಒಳಿತೇ ಆಗುತ್ತದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ದಿನೇಶ್ ಕುಮಾರ್ ದೀಪ ಪ್ರಜ್ವಲಿಸಿದರು. ಸಂಘದ ಅಧ್ಯಕ್ಷ ಜಗದೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಗ್ಯಾರೇಜು ಮಾಲಕ ಸಂಘದ ಸದಸ್ಯರೆಲ್ಲರೂ ಬಡವರಾದರೂ ಅವರ ಹೃದಯ ಶ್ರೀಮಂತಿಕೆಯಿಂದ ಸಂಘ ಇಂದು ತಾಲೂಕಿಟಿ ಪ್ರತಿಷ್ಠಿತ ಸಂಘಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ. ಸಂಘಕ್ಕೆ ನಿಶ್ಚಿತವಾದ ಆದಾಯ ಮೂಲ ಇಲ್ಲದೇ ಇದ್ದರೂ ಕೂಡ ಸದಸ್ಯರ ದುಡಿಮೆಯ
ಒಂದಂಶವನ್ನು ಉಳಿಸಿ ವರ್ಷಕ್ಕೆ ಮೂರು ಲಕ್ಷಕಿಂತಲೂ ಅಧಿಕ ಮೊತ್ತವನ್ನು ಬಡವರಿಗಾಗಿ ನೀಡಲಾಗುತ್ತಿದೆ ಎಂದರು.
ಶಾಸಕ ರಾಜೇಶ್ ನಾಕ್ ಅವರು ಭೇಟಿ ನೀಡಿದರು. ಜಿಲ್ಲಾ ಸಂಘದ ಚೆಯರ್‌ಮನ್ ಪುಂಡಲೀಕ ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲಿನಲ್ಲೇ ಪರೀಕ್ಷೆ ಬರೆದು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾದ ದಿವ್ಯಾಂಗ ಚೇತನ ವಿದ್ಯಾರ್ಥಿ ಕೌಶಿಕ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಖಜಾಂಚಿ ಜನಾರ್ದನ ಕುಲಾಲ್, ಸಂಘಟನಾ ಕಾರ್ಯದರ್ಶಿ ಗಣೇಶ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ರಾಜೇಶ್ ಸಾಲ್ಯಾನ್ ಸ್ವಾಗತಿಸಿದರು. ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್ ಪ್ರಾಸ್ತವಿಕವಾಗಿ ಮಾತನಾಡಿದರು. ಪ್ರತಿಮಾ ರಮೇಶ ಆಟಿ ತಿಂಗಳ ವಿಶೇಷತೆಯ ಬಗ್ಗೆ ಮಾಹಿತಿ ನೀಡಿದರು. ಸಂಘಟನಾ ಕಾರ್ಯದರ್ಶಿ ಸುಧೀರ್ ಬೈಪಾಸ್ ವಂದಿಸಿದರು. ರಂಗ ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಆಟಿದ ನೆಂಪು ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರು ಸುಮಾರು ೪೦ ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಿ ತಂದಿದ್ದರು. ಸಂಘದ ಸದಸ್ಯರಿಗೆ ವಿವಿಧ ಮನೋರಂಜನಾ ಆಟೋಟಗಳು ನಡೆಯಿತು.
















