ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪುರಸಭೆ ವತಿಯಿಂದ ಮಂಗಳೂರು (ಉಳ್ಳಾಲ) ಕ್ಷೇತ್ರದ ಸಜಿಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಕಳೆದ 10 ವರ್ಷಗಳ ಹಿಂದೆ ಒಟ್ಟು 9 ವಾಹನ ಸಹಿತ ರೂ 250 ಕೋಟಿ ವೆಚ್ಚದಲ್ಲಿ ಆರಂಭಗೊಂಡ ತ್ಯಾಜ್ಯ ಸಂಸ್ಕರಣಾ ಘಟಕ ಬಗ್ಗೆ ರಾಜಕೀಯ ಪ್ರೇರಿತ ವಿವಾದ, ಪ್ರತಿಭಟನೆ ಬಳಿಕ ಕಳೆದ ವಿಧಾನ ಸಭೆ ಅಧಿವೇಶನದಲ್ಲಿ ಕೂಡಾ ಭಾರೀ ಸದ್ದು ಮಾಡಿತ್ತು.
ಇದೀಗ ಬಂಟ್ವಾಳ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರು ತನ್ನ 200 ಎಕರೆ ವಿಸ್ತೀರ್ಣ ಹೊಂದಿರುವ ಒಡ್ಡೂರು ಫಾಮ್ಸ್ರ್ ಬಳಿ 60 ಸೆಂಟ್ಸ್ ಜಮೀನಿನಲ್ಲಿ ರೂ 3 ಕೋಟಿ ವೆಚ್ಚದಲ್ಲಿ ಹಸಿ ತ್ಯಾಜ್ಯದಿಂದ ಗುಣಮಟ್ಟದ ಎಥೆನಾಲ್ ಗ್ಯಾಸ್ ತಯಾರಿಕೆ ಆರಂಭಿಸಿ ಗಮನ ಸೆಳೆದಿದ್ದಾರೆ.
ಕಳೆದ 6 ತಿಂಗಳಿನಿಂದ ಮಂಗಳೂರು 'ರಿಟ್ಯಾಪ್ ಸೊಲ್ಯೂಶನ್ಸ್' ಸಂಸ್ಥೆ ನೆರವು ಪಡೆದು ಹೊಸ ಪ್ಲ್ಯಾಂಟ್ ಆರಂಭಿಸಿ, ಮುಂದಿನ ಸೆಪ್ಟೆಂಬರ್ ತಿಂಗಳು ಲೋಕಾರ್ಪಣೆಗೊಳಿಸಲು ಮುಂದಾಗಿದ್ದಾರೆ. ಶೀಘ್ರವೇ ಸುತ್ತಲೂ ಹಸಿರು ಪ್ಲ್ಯಾಂಟ್ ಬೆಳೆದು, ಎಥೆನಾಲ್ ಪ್ಲ್ಯಾಂಟ್ ಉದ್ಘಾಟನೆಗೆ ಕೇಂದ್ರ ಇಂಧನ ಮತ್ತು ರಸಗೊಬ್ಬರ ಖಾತೆ ಸಚಿವರನ್ನು ಕರೆಸುವುದು. ಪ್ರತೀ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇಂತಹ ಘಟಕ ತೆರೆಯಲು ಸರ್ಕಾರದ ನೆರವು ಸಿಗಬೇಕು. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ 'ಸ್ವಚ್ಛ ಭಾರತ್, ಶ್ರೇಷ್ಟ ಭಾರತ್' ಕನಸು ನನಸುಗೊಳಿಸಬೇಕು. ಇನ್ನೊಂದೆಡೆ ಟನ್ ಗಟ್ಟಲೆ ಹಸಿ ತ್ಯಾಜ್ಯ ಮತ್ತು ನೀರು ಮರು ಬಳಕೆ ಮೂಲಕ ಎಥೆನಾಲ್ ಗ್ಯಾಸ್ ಮತ್ತು ಕೃಷಿಕರಿಗೆ ಗುಣಮಟ್ಟದ ಸಾವಯವ ಗೊಬ್ಬರ ಪೂರೈಕೆ ಸಾಧ್ಯವಾಗುತ್ತದೆ. ರಸಗೊಬ್ಬರ ಮತ್ತು ಇಂಧನಕ್ಕೆ ವಿದೇಶ ಅವಲಂಬಿಸುವ ಬದಲಾಗಿ ಸ್ವದೇಶಿ ಉತ್ಪನ್ನ ಮತ್ತು ಸ್ವಾವಲಂಬನೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.
ಈ ಹಸಿ ತ್ಯಾಜ್ಯದಿಂದ ಸಿ ಎನ್ ಜಿ ಪ್ಲ್ಯಾಂಟ್ ಆರಂಭಿಸಲು ನನ್ನ ಪುತ್ರ ಉನ್ನತ್ ನಾಯ್ಕ್ ಗುಜರಾತ್ ಮತ್ತಿತರ ಕಡೆಗೆ ತೆರಳಿ ಮಾರ್ಗದರ್ಶನ ಪಡೆದುಕೊಂಡಿದ್ದು, ಗೂಗಲ್ ಮತ್ತಿತರ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಡಿ 'ಸ್ವೀಡನ್' ದೇಶದ ಮಾದರಿ ಪ್ಲ್ಯಾಂಟ್ ಆರಂಭಸಿದ್ದಾರೆ ಎಂದು ಶಾಸಕ ರಾಜೇಶ ನಾಯ್ಕ್ ಹೇಳಿದ್ದಾರೆ.
ಎಥೆನಾಲ್, ಸಾವಯವ
ಗೊಬ್ಬರ ನೀರು ತಯಾರಿ:
ದಿನವೊಂದಕ್ಕೆ ಸುಮಾರು 10 ಟನ್ ತರಕಾರಿ ಮತ್ತಿತರ ಹಸಿ ತ್ಯಾಜ್ಯ ಸಂಗ್ರಹಿಸಿ, ಇದರಲ್ಲಿ ಬೇರೆ ಯಾವುದೇ ವಸ್ತು ಇರದಂತೆ ಬೇರ್ಪಡಿಸಿ ಯಂತ್ರದಲ್ಲಿ ತುಂಡರಿಸಲಾಗುತ್ತದೆ. ಇದೇ ವೇಳೆ ಸ್ಥಳೀಯ ಕೋಳಿ ಆಹಾರ ತಯಾರಿಕಾ ಘಟಕ ಮತ್ತು ಚಿಪ್ಸ್ ತಯಾರಿಕಾ ಘಟಕದಿಂದ ಹೊರ ಚೆಲ್ಲುವ ಸುಮಾರು 10 ಸಾವಿರ ಲೀಟರ್ ನೀರನ್ನು ಮರು ಬಳಕೆ ಮಾಡುತ್ತೇವೆ. ಈ ನೀರು ಮತ್ತು ತುಂಡರಿಸಿದ ಹಸಿ ತ್ಯಾಜ್ಯ ಮಿಶ್ರಣಗೊಂಡು ನೆಲದಲ್ಲಿ ಐದೂವರೆ ಮೀಟರ್ ಆಳದಲ್ಲಿ ರಚಿಸಿದ ಪ್ರಥಮ ಪ್ಲ್ಯಾಂಟ್ನಲ್ಲಿ ದ್ರವ ರೂಪದಲ್ಲಿ ಶೇಖರಣೆಗೊಂಡು ಬಳಿಕ ನೆಲ ಮತ್ತು ಮೇಲ್ಭಾಗದಲ್ಲಿರುವ ಏಳು ಮೀಟರ್ ಸಾಮಥ್ರ್ಯದ ಎರಡನೇ ಪ್ಲ್ಯಾಂಟ್ ನಲ್ಲಿ ಬಯೋಗ್ಯಾಸ್ ಆಗಿ ಪರಿವರ್ತನೆಗೊಳ್ಳುತ್ತದೆ. ಆ ಬಳಿಕ ಎಥೆನಾಲ್ ಆಗಿ ಶುದ್ಧೀಕರಣಗೊಂಡು ಬೆಲೂನ್ ಪ್ಲ್ಯಾಂಟ್ ನಲ್ಲಿ ಸಂಗ್ರಹಗೊಂದು ಮತ್ತೆ ಸಿಲಿಂಡರ್ ತುಂಬುವ ಪ್ರದೇಶಕ್ಕೆ ರವಾನೆಯಾಗುತ್ತದೆ. ಇದೇ ವೇಳೆ ಗುಣಮಟ್ಟದ ಸಾವಯವ ಗೊಬ್ಬರ ನೀರು (ಸ್ಲರಿ) ಟ್ಯಾಂಕರ್ ಗೆ ತುಂಬಲು ಪ್ರತ್ಯೇಕ ವ್ಯವಸ್ಥೆ ಇದೆ.
ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧೆಡೆ ಕೃಷಿಕರ ಮಣ್ಣಿನ ಪರೀಕ್ಷೆ ನಡೆಸಿ ಅದಕ್ಕೆ ತಕ್ಕಂತೆ ಗುಣಮಟ್ಟದ ಸಾವಯವ ಗೊಬ್ಬರ ಮತ್ತು ಗೊಬ್ಬರ ನೀರು ಪೂರೈಸುವ ಬಗ್ಗೆಯೂ ಚಿಂತನೆ ನಡೆಸುವುದಾಗಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ತಿಳಿಸಿದ್ದಾರೆ.
ಈಜಿಪ್ಟ್ ಕಂಪೆನಿಯಲ್ಲಿ ಉನ್ನತ ಅಧಿಕಾರಿ ಆಗಿರುವ ಪ್ರಶಾಂತ್ ಲಕ್ಷ್ಮಣ್ ದೇವಾಡಿಗ ಇವರು ಕಳೆದ 6 ವರ್ಷಗಳ ಹಿಂದೆ ಮಂಗಳೂರಿನಲ್ಲಿ 'ರಿಟ್ಯಾಪ್ ಸೊಲ್ಯೂಶನ್ಸ್' ಸಂಸ್ಥೆ ಆರಂಭಿಸಿ, ವಿವಿಧ ಕಂಪೆನಿಗಳಿಗೆ ಇಂತಹ ಗುಣಮಟ್ಟದ ಸಿ ಎನ್ ಜಿ ತಯಾರಿಸಲು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಸಂಸ್ಥೆ ಮೇಲ್ವಿಚಾರಕ ಶರಣ್ ವೇಣೂರು ತಿಳಿಸಿದ್ದಾರೆ.















