ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆತ್ತವರ ಪಾದಪೂಜೆ ಹಾಗೂ ಕೈತುತ್ತು ಹೃದಯ ಸ್ಪರ್ಶಿ ಕಾರ್ಯಕ್ರಮ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು. ೧ನೇ ಮತ್ತು ೨ನೇ ತರಗತಿಯ ಮಕ್ಕಳ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಶ್ರೀರಾಮ ಪ್ರಾಥಮಿಕ ವಿಭಾಗದ ಸಂಸ್ಕೃತ ಅಧ್ಯಾಪಕರಾದ ಅನ್ನಪೂರ್ಣ ಎನ್ ಭಟ್ ತಾಯಿಯಲ್ಲಿ ದೇವರನ್ನು ಕಾಣುವುದು ನಮ್ಮ ಸಂಸ್ಕೃತಿ. ಆ ತಾಯಿಯ ಪಾದಪೂಜೆ ಮಾಡುವುದು ಸರ್ವಶ್ರೇಷ್ಟ ಪೂಜೆಯಾಗಿದೆ. ಇದು ನಮ್ಮ ಶ್ರೇಷ್ಟ ಪರಂಪರೆಯಾಗಿದೆ. ಈ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿ ಪಾದ ಪೂಜೆಯ ಮಹತ್ವವನ್ನು ತಿಳಿಸಿದರು.
ಈ ಸಂದರ್ಭ ಮೊದಲಿಗೆ ಹೆತ್ತವರನ್ನು ಕುಳ್ಳಿರಿಸಿ, ಪರದೆಯನ್ನು ಅಡ್ಡ ಹಿಡಿಯಲಾಗಿತ್ತು. ಮಕ್ಕಳು ತಮ್ಮ ಹೆತ್ತವರ ಪಾದವನ್ನು ಗುರುತಿಸಿ ಅವರ ಮುಂದೆ ಕುಳಿತುಕೊಂಡ ನಂತರ ಪರದೆಯನ್ನು ಸರಿಸಲಾಯಿತು. ಮಕ್ಕಳು ತನ್ನ ಹೆತ್ತವರ ಪಾದ ತೊಳೆದು ಅರಸಿನ ಕುಂಕುಮ ಹಚ್ಚಿ ಪಾದಗಳಿಗೆ ಹೂವಿನ ಅರ್ಚನೆ ಮಾಡಿ ನಮಸ್ಕರಿಸಿದರು. ಹಾಗೆಯೇ ಹೆತ್ತವರು ತಮ್ಮ ಮಕ್ಕಳಿಗೆ ಅಕ್ಷತೆ ಹಾಕಿ ಆರ್ಶೀವಾದ
ಮಾಡಿ ಸಿಹಿ ತಿನಿಸಿದರು.
ಬಳಿಕ ಕೈತುತ್ತು ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಕತೆ, ಹಾಡು ಹೇಳುತ್ತಾ, ಕುಶಲೋಪರಿ ವಿಚಾರಿಸುತ್ತಾ, ಕೈತುತ್ತು ನೀಡಿದರು. ತಾಯಿ ಮತ್ತು ಮಗುವಿನ ಬಾಂಧವ್ಯವನ್ನು ಹೆಚ್ಚಿಸುವ ಈ ಕಾರ್ಯಕ್ರಮದಲ್ಲಿ ೧ ಮತ್ತು ೨ನೇ ತರಗತಿಯ ಮಕ್ಕಳ ತಾಯಂದಿರು ಭಾಗವಹಿಸಿ, ೧ನೇ ತರಗತಿಯ ಮಕ್ಕಳಿಗೆ ೨ನೇ ತರಗತಿಯ ಪೋಷಕರು ಕೈತುತ್ತು ನೀಡಿದರು. ಈ ಮೂಲಕ ತಮ್ಮ ಮಗುವಿನ ಜೊತೆ ಇರುವ ಬಾಂಧವ್ಯದೊಡನೆ ಇತರ ಮಗುವಿನ ಜೊತೆ ಬಾಂಧವ್ಯ ಬೆಸೆಯಲು ಈ ಕಾರ್ಯಕ್ರಮವು ಸಾಕ್ಷಿಯಾಯಿತು.
ಇದೇ ವೇಳೆ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ತಾಯಿಯ ವಿಶೇಷತೆಯನ್ನು ಸಾರುವ ಹಾಡುಗಳನ್ನು ಹಾಡಿದರು.ವೇದಿಕೆಯಲ್ಲಿ ಶಾಲಾ ಪೋಷಕರಾದ ಅಕ್ಷತಾ, ಕವಿತ, ಮಮತ, ಸವಿತ, ಜಯಶ್ರೀ, ಹೇಮಲತಾ ಹಾಗೂ ಮುಖ್ಯ ಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಅಧ್ಯಾಪಕರಾದ ರೂಪಕಲಾ ಸ್ವಾಗತಿಸಿ,ಸವಿತಾ ನಿರೂಪಿಸಿದರು.














